Hittalahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ 30 ವರ್ಷಗಳ ಬಳಿಕ ಗ್ರಾಮದೇವತೆಗಳ ಜಾತ್ರಾ ಮಹೋತ್ಸವ ಹಾಗೂ ತಂಬಿಟ್ಟಿನ ದೀಪೋತ್ಸವ ಮಂಗಳವಾರ ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನಡೆಯಿತು. ಗ್ರಾಮದ ಪ್ರತಿಯೊಂದು ಕುಟುಂಬವೂ ಜಾತಿ-ಬೇಧ ಮರೆತು ಒಗ್ಗಟ್ಟಿನಿಂದ ಜಾತ್ರೆಯಲ್ಲಿ ಪಾಲ್ಗೊಂಡಿತು.
ಜಾತ್ರೆಯ ಅಂಗವಾಗಿ ಗ್ರಾಮದ ಮುಖ್ಯ ದ್ವಾರದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಗ್ರಾಮದೇವತೆಗಳಾದ ಗಂಗಾದೇವಿ, ಮುನೇಶ್ವರಸ್ವಾಮಿ, ನರಸಿಂಹಸ್ವಾಮಿ, ಗೋಪಾಲಸ್ವಾಮಿ, ಅಯ್ಗಂಡ್ಲಮ್ಮ, ಶನಿಮಹಾತ್ಮ, ಆಂಜನೇಯಸ್ವಾಮಿ, ಸಪ್ಪಲಮ್ಮ ಹಾಗೂ ನೆರೆಡಮ್ಮ ದೇವಿಯ ಸನ್ನಿಧಿಗಳಲ್ಲಿ ಅಭಿಷೇಕ, ಅಲಂಕಾರ, ಪೂಜೆ ಮತ್ತು ಮಂಗಳಾರತಿ ನೆರವೇರಿತು. ಭಕ್ತರು ವಿಶೇಷ ಹರಕೆ ಸಲ್ಲಿಸಿ ಕುಟುಂಬದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದ ತಂಬಿಟ್ಟಿನ ದೀಪೋತ್ಸವದಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ ತಂಬಿಟ್ಟಿನ ದೀಪಗಳನ್ನು ತಲೆಯ ಮೇಲೆ ಹೊತ್ತು ತಮಟೆ ವಾದ್ಯಗಳೊಂದಿಗೆ ಭಕ್ತಿಪೂರ್ವಕ ಮೆರವಣಿಗೆಯಲ್ಲಿ ಸಾಗಿದರು. ಗ್ರಾಮದ ಊರಬಾಗಿಲಿನಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ದೇವಾಲಯಗಳಿಗೆ ತಲುಪಿ, ದೀಪ ಬೆಳಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಭಕ್ತರು ಜಯಘೋಷ ಮೊಳಗಿಸಿ ದೇವಿಯ ನಾಮಸ್ಮರಣೆ ಮಾಡಿದರು.
ಜಾತ್ರೆ ನಿಮಿತ್ತ ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗ್ರಾಮದೇವತೆಗಳ ಉತ್ಸವಮೂರ್ತಿಗಳನ್ನು ಅಲಂಕರಿಸಿದ ವಾಹನಗಳಲ್ಲಿ ಪ್ರತಿಷ್ಠಾಪಿಸಿ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು. ತಮಟೆ ಹಾಗೂ ಮಂಗಳವಾದ್ಯಗಳ ನಾದಕ್ಕೆ ಯುವಕರು ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಉತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು. ರಾತ್ರಿ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆದವು.
ಜಾತ್ರೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು, ಸ್ನೇಹಿತರು ಹಾಗೂ ಸಂಬಂಧಿಕರು ತೀರ್ಥಪ್ರಸಾದ ಸ್ವೀಕರಿಸಿ ದೇವರ ಆಶೀರ್ವಾದ ಪಡೆದರು.
30 ವರ್ಷಗಳ ಬಳಿಕ ಜಾತ್ರೆ
ಹಿತ್ತಲಹಳ್ಳಿ ಗ್ರಾಮದಲ್ಲಿ 30 ವರ್ಷಗಳ ಬಳಿಕ ನಡೆದ ಗ್ರಾಮದೇವತೆಗಳ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಪ್ರತಿಯೊಂದು ಕುಟುಂಬವೂ ಜಾತಿ-ಬೇಧ ಮರೆತು ಒಗ್ಗಟ್ಟಿನಿಂದ ಪಾಲ್ಗೊಂಡಿತು. ಸಂಪ್ರದಾಯದಂತೆ ಗ್ರಾಮದ ಕೆರೆಗೆ ತೆರಳಿ ಮಣ್ಣಿನಿಂದ ಗಂಗಮ್ಮನ ಮೂರ್ತಿ ನಿರ್ಮಿಸಿ, ಗುಡಿಕಟ್ಟಿ ಹೆಣ್ಣುಮಕ್ಕಳು ತಂಬಿಟ್ಟಿನ ದೀಪಗಳನ್ನು ಬೆಳಗಿ ಉತ್ತಮ ಮಳೆಯಾಗಲೆಂದು ಪ್ರಾರ್ಥಿಸಿದರು ಎಂದು ಗ್ರಾಮದ ಹಿರಿಯ ಎಚ್.ಜಿ. ಗೋಪಾಲಗೌಡ ತಿಳಿಸಿದರು.
ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಲೋಕೇಶ್, ಎಚ್.ಎಂ. ರಾಮಪ್ಪ, ಬಿ.ಎಂ. ಮುನಿರಾಜು, ಜಿ. ಶ್ರೀನಿವಾಸ್, ಎ.ಕೆ. ಮಾರಪ್ಪ, ವಕೀಲ ಮುನಿರಾಜು, ಉಗ್ರಪ್ಪ ಸೇರಿದಂತೆ ಹಲವರು ಹಾಜರಿದ್ದರು.
In English: Hittalahalli village in Sidlaghatta taluk held its gram devate jatra mahotsava and thambittu deepotsava on Tuesday for the first time in 30 years. Villagers performed rituals for nine gram devates, and women carried flower-decorated thambittu lamps in a procession through the village to the temples, with elders, youth and residents of neighbouring villages taking part.