Sidlaghatta : ಜಮೀನಿನ ಖಾತೆ ಮಾಡಿಕೊಡಲು ₹6.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ನಾಡಕಚೇರಿಯಲ್ಲಿ ಕೆಲಸ ನಿರ್ವಹಿಸುವ ಗ್ರಾಮ ಲೆಕ್ಕಿಗ ಮೋಹನ್ ಕುಮಾರ್ ಸಿ. ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದ ಸರ್ವೆ ನಂಬರ್ 298/1ರಲ್ಲಿ 0.14¼ ಗುಂಟೆ ಜಮೀನಿನ ಖಾತೆ ಮಾಡಿಕೊಡುವಂತೆ ದೂರುದಾರ ಬೈರೇಗೌಡ ಅವರು ಜಂಗಮಕೋಟೆ ನಾಡಕಚೇರಿಯಲ್ಲಿ ಕೆಲಸ ನಿರ್ವಹಿಸುವ ಗ್ರಾಮ ಲೆಕ್ಕಿಗ ಮೋಹನ್ ಕುಮಾರ್ ಅವರನ್ನು ಸಂಪರ್ಕಿಸಿದ್ದರು.
ಈ ವೇಳೆ ಖಾತೆ ಮಾಡಿಕೊಡಲು ಮೊದಲಿಗೆ ₹7 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಮಾತುಕತೆಯ ಬಳಿಕ ₹6.50 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದು, ಮುಂಗಡವಾಗಿ ₹3 ಲಕ್ಷ ನೀಡುವಂತೆ ಒತ್ತಾಯಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರು ಆಧರಿಸಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಅಧಿಕಾರಿಗಳು, ಆರೋಪಿಯನ್ನು ಬಂಧಿಸಿದ್ದಾರೆ.
ಎಸ್ಪಿ ಆಂಟೋನಿ ಜಾನ್ ಅವರ ನೇತೃತ್ವದಲ್ಲಿ, ಡಿವೈಎಸ್ಪಿ ವೀರೇಂದ್ರ ಕುಮಾರ್, ಇನ್ಸ್ಪೆಕ್ಟರ್ ಶಿವರಾಜ್ ಕುಮಾರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಇದಕ್ಕೂ ಮುನ್ನ ತಾಲ್ಲೂಕಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದ ಪ್ರಕರಣವೂ ವರದಿಯಾಗಿತ್ತು.
In English: Lokayukta police arrested village accountant Mohan Kumar C., who works at the Jangamakote revenue office, on charges of demanding a ₹6.5 lakh bribe to process a land khata (title record) for a 0.14¼ guntas plot in Hosapete village. The complainant, Byregowda, alleged the accused initially demanded ₹7 lakh, later negotiated down to ₹6.5 lakh with ₹3 lakh sought as an advance. A case was registered at the Chikkaballapur Lokayukta police station, and the accused was arrested during a trap operation led by SP Antony John. Investigation is ongoing.

