Home News ಮೇಲೂರಿನ ಗ್ರಾಮದೇವತೆ ಗಂಗಾದೇವಿಯ ಜಾತ್ರೆ

ಮೇಲೂರಿನ ಗ್ರಾಮದೇವತೆ ಗಂಗಾದೇವಿಯ ಜಾತ್ರೆ

0
Sidlaghatta Melur Gangadevi Jathre

Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಪುರಾತನ ಗ್ರಾಮದೇವತೆ ಗಂಗಾದೇವಿಯ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.

ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಜಾತ್ರಾ ಮಹೋತ್ಸವವನ್ನು ಶ್ರದ್ಧಾಭಕ್ತಿಯಿಂದ ನಡೆಯಿತು.

ವಾಲ್ಮೀಕಿ ಮತಸ್ಥರಿಂದ ಪ್ರತಿ ವರ್ಷ ನಡೆಸುವ ಸೊಪ್ಪಿನ ವ್ರತಕ್ಕೆ ಹಲವಾರು ಮಂದಿ ಭಕ್ತರು ಸಾಕ್ಷಿಯಾದರು. ಅಮ್ಮನವರ ದೀಪೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮಗಳಾದ ಕೇಶವಾರ, ಹಂಡಿಗನಾಳ, ಮಳ್ಳೂರು, ಕಂಬದಹಳ್ಳಿ, ಚೌಡಸಂದ್ರ, ಗಂಗನಹಳ್ಳಿ ಮುಂತಾದೆಡೆಯಿಂದ ಗ್ರಾಮಸ್ಥರು ಆಗಮಿಸಿದ್ದರು.

ರಾತ್ರಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಭಾಗಿಯಾದರು. ನಂತರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಾದ್ಯಗೋಷ್ಠಿಯು ಎಲ್ಲರನ್ನೂ ಮನರಂಜಿಸಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ಗಂಗಾದೇವಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.

ಬುಧವಾರ ಬೆಳಗಿನ ಜಾವ ದೀಪಾರತಿಗಳು ನಡೆದವು. ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಮಹಿಳೆಯರು ತಂಬಿಟ್ಟು ದೀಪಗಳನ್ನು ತಂದು ದೇವಿಗೆ ಬೆಳಗಿ ಪೂಜೆ ಸಲ್ಲಿಸಿದರು. ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರಿಗೆ ಮೇಲೂರಿನ ಗ್ರಾಮಸ್ಥರು ಸ್ವಾಗತವನ್ನು ಕೋರಿ, ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ನೀಡಿ ಸತ್ಕರಿಸಿದುದು ಗ್ರಾಮಗಳ ನಡುವಿನ ಭಾವೈಕ್ಯತೆಯನ್ನು ಸಾರಿತು.

“ನಮ್ಮ ಮೇಲೂರು ಗ್ರಾಮದ ಅಧಿದೇವತೆ ಗಂಗಮ್ಮ ತಾಯಿಯು ಮಳೆ ಬೆಳೆಯನ್ನು ನೀಡಿ ಶಾಂತಿ ನೆಮ್ಮದಿಯನ್ನು ಕರುಣಿಸಲೆಂದು ಪ್ರತಿವರ್ಷ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಸುತ್ತಲಿನ ಹಲವಾರು ಗ್ರಾಮಗಳಿಂದ ಆಗಮಿಸುವ ಭಕ್ತರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಂಗಳವಾರ ಬ್ರಹ್ಮರಥೋತ್ಸವವನ್ನು ಆಚರಿಸುತ್ತೇವೆ. ನಮ್ಮ ಗ್ರಾಮಗಳಿಂದ ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಹೆಣ್ಣುಮಕ್ಕಳು ತಮ್ಮ ತವರುಮನೆಗೆ ಬಂದು ಅಮ್ಮನವರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ” ಎಂದು ಮೇಲೂರಿನ ಶ್ರೀನಿವಾಸ್ ಪುಲಿ ತಿಳಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version