
Sidlaghatta : ಆದಿ ಶಂಕರಾಚಾರ್ಯರ ಜಯಂತಿಯು ಭಾರತೀಯ ಸಂಸ್ಕೃತಿ, ತತ್ವಜ್ಞಾನ ಮತ್ತು ಅಧ್ಯಾತ್ಮ ಲೋಕದ ಅತ್ಯಂತ ಮಹತ್ವದ ದಿನವಾಗಿದೆ. ಭಾರತದ ಶ್ರೇಷ್ಠ ದಾರ್ಶನಿಕ ಶಂಕರಾಚಾರ್ಯರ ಅದ್ವೈತ ತತ್ವ ಇಂದಿಗೂ ನಮ್ಮ ಜೀವನದ ಮಾರ್ಗದರ್ಶಿಯಾಗಿದೆ. ಜ್ಞಾನದ ಬೆಳಕಿನಿಂದ ಸಮಾಜವನ್ನು ಮುನ್ನಡೆಸೋಣ ಎಂದು ತಹಶೀಲ್ದಾರ್ ಗಗನಸಿಂಧು ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಂಕರರು ಜಾತಿ, ಮತ, ಪಂಗಡ ಹಾಗೂ ದೇಶಗಳನ್ನು ಮೀರಿ ಜಗತ್ತಿಗೆ ಅನ್ವಯವಾಗುವ ಸತ್ಯವನ್ನು ಬೋಧಿಸಿದ ಜಗದ್ಗುರುಗಳು. ಅಂತಃಕರಣ ಶುದ್ಧಿಯಾದರೆ ಪ್ರತಿಯೊಬ್ಬ ಮನುಷ್ಯನಿಗೂ ಮೋಕ್ಷದ ಅಧಿಕಾರವಿದೆ. ಅಜ್ಞಾನದ ನಿವೃತ್ತಿಯೇ ಮುಕ್ತಿಗೆ ದಾರಿ ಎಂದು ಅವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಶಿಡ್ಲಘಟ್ಟ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎ.ಎಸ್.ರವಿ ಮಾತನಾಡಿ, ಶಂಕರರು ಅಧ್ಯಾತ್ಮ ಲೋಕದ ಮಹಾನ್ ಸೂರ್ಯ. ಅಂದಿನ ಕಾಲದಲ್ಲಿ ವಿಚ್ಛಿನ್ನವಾಗಿದ್ದ ಹಿಂದೂ ಧರ್ಮವನ್ನು ಒಗ್ಗೂಡಿಸಿ, ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನು (ಶೃಂಗೇರಿ, ದ್ವಾರಕಾ, ಪುರಿ, ಜ್ಯೋತಿರ್ಮಠ) ಸ್ಥಾಪಿಸಿ, ವೇದಾಂತ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿದರು. ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರಗಳಿಗೆ (ಪ್ರಸ್ಥಾನತ್ರಯ) ಅದ್ವೈತ ಭಾಷ್ಯವನ್ನು ಬರೆದರು. ಭಜಗೋವಿಂದಂ, ವಿವೇಕಚೂಡಾಮಣಿಯಂತಹ ಕೃತಿಗಳನ್ನು ರಚಿಸಿದರು ಎಂದು ವಿವರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಶಂಕರ ಮಠ ಅಭಿವೃದ್ಧಿ ಸಮಿತಿಯ ವಿ.ಕೃಷ್ಣ, ಶ್ರೀಕಾಂತ್, ಎ.ನಾಗರಾಜ್, ಎಸ್.ಆರ್.ಶ್ರೀನಿವಾಸಮೂರ್ತಿ, ನಾರಾಯಣ ಕುಲಕರ್ಣಿ, ಶಾಮಸುಂದರ್, ಎಸ್.ವಿ.ನಾಗರಾಜರಾವ್ ಹಾಜರಿದ್ದರು.