
Sugaturu, Sidlaghatta : ಶಿಡ್ಲಘಟ್ಟ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಸುಗಟೂರು ಶ್ರೀ ಕಲ್ಲೇಶ್ವರಸ್ವಾಮಿ, ಶ್ರೀ ಸಿದ್ಧರಾಮೇಶ್ವರಸ್ವಾಮಿಯವರ ಜಾತ್ರಾಮಹೋತ್ಸವವು ಏಪ್ರಿಲ್ 25 ರಿಂದ 28 ರವರೆಗೆ ಅದ್ದೂರಿಯಾಗಿ ನೆರವೇರಲಿದೆ. ಸುಮಾರು 9 ವರ್ಷಗಳ ನಂತರ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವವು ಸುಗಟೂರು ಉತ್ಸವದ ರೀತಿಯಲ್ಲಿಯೇ ನಡೆಯಲಿದ್ದು, ಹಿಂದಿನ ಸುಗಟೂರು ಪಾಳೆಯಗಾರರ ರಾಜಧಾನಿಯನ್ನು ನೆನಪಿಸಲಿದೆ.
ಏಪ್ರಿಲ್ 25 ರಂದು ಕೂಟ, 26 ರಂದು ಹೊಳೆ ಪರಿಷೆ ನಡೆಯಲಿದೆ. ಅಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಅನೇಕ ಮಂತ್ರಿಗಳು, ಶಾಸಕರು, ಗಣ್ಯರು ಭಾಗವಹಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಏಪ್ರಿಲ್ 27 ರಂದು ಹೊಳೆಪರಿಷೆ ಮುಂದುವರಿಯಲಿದ್ದು, ಸಾಯಂಕಾಲ ದೀಪಾರಾಧನೆ ನಡೆಯಲಿದೆ. ಏಪ್ರಿಲ್ 28 ರಂದು ಮಕ್ಕಳ ಚೌಲೋಪನಯನ, ದೇವರ ದರ್ಶನ, ಗುರುಗಳ ಆಶೀರ್ವಾದದ ನಂತರ ಭಕ್ತರು ಸ್ವಸ್ಥಾನಗಳಿಗೆ ತೆರಳುವ ಕಾರ್ಯಕ್ರಮಗಳು ನಡೆಯಲಿವೆ.
ನವವಧುವಿನಂತೆ ಸಿಂಗಾರ:
ಜಾತ್ರಾಮಹೋತ್ಸವಕ್ಕೆ ರಾಜ್ಯ ಮತ್ತು ಸುತ್ತಮುತ್ತಲಿನ ರಾಜ್ಯದ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಲಿರುವುದರಿಂದ ಈಗಾಗಲೇ ದೇವಾಲಯ ಟ್ರಸ್ಟ್ ನ ಅಧ್ಯಕ್ಷರೂ ಆದ ಹನೂರು ಕ್ಷೇತ್ರದ ಶಾಸಕ ಎಂ.ಆರ್.ಮಂಜುನಾಥ್, ಶಾಸಕ ರವಿಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿದ್ದು, ಅನೇಕ ಅಭಿವೃದ್ಧಿಕಾಮಗಾರಿಗಳು ನಡೆಯುತ್ತಿವೆ. ಪ್ರಮುಖ ರಸ್ತೆಗಳಿಗೆ ಕಾಂಕ್ರೀಟ್, ಬೀದಿದೀಪಗಳ ಅಳವಡಿಕೆ, ಚರಂಡಿ ಸರಿಪಡಿಸಿ ಸ್ವಚ್ಚಗೊಳಿಸುವಿಕೆ, ಅಗತ್ಯ ವಿದ್ಯುತ್ ಪರಿವರ್ತಕಗಳ ಅಳವಡಿಕೆ, ನೂತನ ಕೊಳವೆಬಾವಿಗಳನ್ನು ಕೊರೆಯಿಸಿ ಪಂಪ್ ಅಳವಡಿಸುವಿಕೆಯಂತಹ ಅನೇಕ ಕೆಲಸಗಳು ಭರದಿಂದ ಸಾಗಿವೆ. ಇಡೀ ಸುಗಟೂರು ಗ್ರಾಮವು ವಿದ್ಯುತ್ ದೀಪ, ಹೂವುಗಳಿಂದ ನವವಧುವಿನಂತೆ ಸಿಂಗಾರಗೊಳ್ಳುತ್ತಿದ್ದು ಬೇರೆಬೇರೆ ಸ್ಥಳಗಳಿಂದ ಇಲ್ಲಿಗೆ ಬರುವ ಭಕ್ತರಿಗೆ ಇಡೀ ನಾಲ್ಕೈದು ದಿಗಳ ಕಾಲ ತಂಗಲು ಗ್ರಾಮದ ಮನೆಗಳಲ್ಲಿ ಸ್ಥಳಾವಕಾಶ ಮಾಡಿಕೊಡಲು ಸಿದ್ಧತೆ ನಡೆದಿದೆ. ಎಲ್ಲರಿಗೂ ನಿರಂತರ ಅನ್ನಸಂತರ್ಪಣೆ, ಕಾರ್ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶ ಸಿದ್ಧತೆ ನಡೆದಿದೆ. ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ನವೀನ್‌ಭಟ್, ತಹಶೀಲ್ದಾರ್ ಗಗನಸಿಂಧು, ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಅನೇಕ ಇಲಾಖಾ ಅಧಿಕಾರಿಗಳು ಭೇಟಿನೀಡಿ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.
ಪುರಾತನ ಇತಿಹಾಸ, ಹಾಲುಮತಸ್ಥರಿಗೆ ಮನೆದೇವರು:
ಕಲ್ಲೇಶ್ವರಸ್ವಾಮಿ ದೇವಾಲಯಕ್ಕೆ ಇತಿಹಾಸವಿದ್ದು, ಸುಂದರ ಮುಖದ್ವಾರ, ಪ್ರಾಂಗಣ, ಗರ್ಭಗುಡಿ ಹಾಗೂ ಆಕರ್ಷಕ ಗೋಪುರವಿದೆ. ಬಹಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂ ಗ್ರಾಮದ ಶಿವಮತಸ್ಥರಾದ ಭದ್ರಾಕಾಳಿಶೆಟ್ಟಿ ಮತ್ತು ವೀರಕಾಳಿಶೆಟ್ಟಿ ಎಂಬುವರು ವ್ಯಾಪಾರ ಮಾಡಿಕೊಂಡು ಬರುವಾಗ ದೈವೀ ಕಲ್ಲುಗಳು ಸಿಕ್ಕವಂತೆ.
ಸುಗಟೂರು ಗ್ರಾಮದಲ್ಲಿ ಆ ಕಲ್ಲುಗಳನ್ನು ಪ್ರತಿಷ್ಠಾಪಿಸಿ ಸಣ್ಣಗುಡಿ ನಿರ್ಮಿಸಿ ಶೆಟ್ಟಿ ಕುಟುಂಬ, ಹಾಲುಮತಸ್ಥರ ಗುಂಪಿಗೆ, ನಾಯಕರ ಗುಂಪಿಗೆ ಒಂದೊಂದು ಜವಾಬ್ದಾರಿ ವಹಿಸಿ ಪ್ರತಿವರ್ಷವೂ ವಿಶೇಷ ಪೂಜೆ ಸಲ್ಲಿಸುವ ಪ್ರತೀತಿ ಇದೆ.
ಅಂದಿನಿಂದಲೂ ವರ್ಷದ ವಿಶೇಷ ದಿನಗಳಂದು ಎತ್ತುಗಳು ತಂದು ತೆಂಗಿನಕಾಯಿ ಹೊಡೆಯುವ ಆಚರಣೆ ಇಲ್ಲಿ ನಡೆದಿದೆ. ಆಗಿನ ಆಚರಣೆಯಂತೆ ಬಸವನವರು, ಪವಾಡದವರು, ಕೋಲುಕಾರರು, ವೀರಗಾರರು, ಹೂವಿನವರು, ಪೆಟ್ಟಿಗೆ ಹೊರುವವರು, ದೂಪಾರ್ತಿಯವರೆಂದು ಗುರುತಿಸಿಕೊಂಡಿರುವ ವಿವಿಧ ಭಾಗಗಳಲ್ಲಿ ಹಂಚಿಹೋಗಿರುವ ಭಕ್ತರು ಜಾತ್ರೆ ವೇಳೆಯಲ್ಲಿ ಸುಗಟೂರು ಗ್ರಾಮದಲ್ಲಿಯೇ ತಂಗಿ ಅದ್ದೂರಿಯಾಗಿ ಜಾತ್ರೆ ಮಾಡುವರು.
ಜಾತ್ರೆ ವೇಳೆ ಇತರೆ ಭಾಗಗಳಿಂದ ಬರುವ ಸಾವಿರಾರು ಭಕ್ತರಿಗೆ ಇಲ್ಲಿನ ಸ್ಥಳೀಯರು ತಮ್ಮ ಮನೆಗಳಲ್ಲಿಯೇ ತಂಗಲು ಅವಕಾಶ ಮಾಡಿಕೊಟ್ಟು ಸಾಮರಸ್ಯ, ಸಹಬಾಳ್ವೆಗೆ ಆನೂಚಾನವಾಗಿ ತೋರುತ್ತಿರುವ ಸಹಕಾರವು ಅನುಕರಣೀಯ ಎನ್ನುತ್ತಾರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ.