Home News ಸುಗಟೂರಿನಲ್ಲಿ ‘ನಮ್ಮ ಗ್ರಾಮ’ ಶಾಲಾಪೂರ್ವ ತಯಾರಿ ಮೇಳದ ಸಂಭ್ರಮ

ಸುಗಟೂರಿನಲ್ಲಿ ‘ನಮ್ಮ ಗ್ರಾಮ’ ಶಾಲಾಪೂರ್ವ ತಯಾರಿ ಮೇಳದ ಸಂಭ್ರಮ

0
Sugaturu Government School Mela

Sugaturu, Sidlaghatta : “ಮಗುವಿನ ಬೌದ್ಧಿಕ ವಿಕಸನಕ್ಕೆ ಶಾಲಾಪೂರ್ವ ವಯಸ್ಸು ಬುನಾದಿ ಇದ್ದಂತೆ. ಈ ಹಂತದಲ್ಲಿ ಕೇವಲ ಅಕ್ಷರಾಭ್ಯಾಸಕ್ಕೆ ಒತ್ತು ನೀಡದೆ, ಆಟದ ಮೂಲಕ ಶಿಕ್ಷಣ ನೀಡಿದಾಗ ಮಕ್ಕಳಲ್ಲಿ ಕಲಿಕೆಯ ಕುರಿತು ಶಾಶ್ವತ ಆಸಕ್ತಿ ಮೂಡುತ್ತದೆ,” ಎಂದು ಪ್ರಥಮ್ ಎಜುಕೇಶನ್ ಫೌಂಡೇಶನ್‌ನ ರಾಜ್ಯ ಮುಖ್ಯಸ್ಥ ಮಂಜುನಾಥ್ ತಿಳಿಸಿದರು. ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪ್ರಥಮ್ ಎಜುಕೇಶನ್ ಫೌಂಡೇಶನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ನಮ್ಮ ಗ್ರಾಮ’ ಶೀರ್ಷಿಕೆಯಡಿ ಆಯೋಜಿಸಲಾಗಿದ್ದ ‘ಶಾಲಾಪೂರ್ವ ತಯಾರಿ ಮೇಳ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಯಿಯ ಪಾತ್ರವನ್ನು ಒತ್ತಿ ಹೇಳಿದ ಮಂಜುನಾಥ್, ತಾಯಿಯೇ ಮಗುವಿನ ಮೊದಲ ಶಿಕ್ಷಕಿ ಮತ್ತು ಮನೆಯೇ ಮೊದಲ ಪಾಠಶಾಲೆ. ಪ್ರತಿಯೊಬ್ಬ ತಾಯಿಯು ದಿನಕ್ಕೆ ಕನಿಷ್ಠ 15 ನಿಮಿಷಗಳನ್ನು ಮಗುವಿನೊಂದಿಗೆ ಕಳೆಯಬೇಕು. ಆಟದ ಮೂಲಕವೇ ಮಕ್ಕಳ ದೈಹಿಕ ಹಾಗೂ ಬೌದ್ಧಿಕ ಸಾಮರ್ಥ್ಯಗಳನ್ನು ಉತ್ತೇಜಿಸಿದಾಗ ಅವರ ಆತ್ಮವಿಶ್ವಾಸ ದುಪ್ಪಟ್ಟಾಗುತ್ತದೆ ಎಂದರು. ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ರುದ್ರೇಶಮೂರ್ತಿ ಮಾತನಾಡಿ, ಮೇಳದಲ್ಲಿ ರೂಪಿಸಲಾದ ಪ್ರತಿ ಚಟುವಟಿಕೆಯೂ ವೈಜ್ಞಾನಿಕ ಮಹತ್ವ ಹೊಂದಿದೆ. ಬಣ್ಣಗಳ ವರ್ಗೀಕರಣ, ಒಗಟು ಬಿಡಿಸುವುದು ಮತ್ತು ಮಣಿ ಪೋಣಿಸುವಂತಹ ಚಟುವಟಿಕೆಗಳು ಮಕ್ಕಳ ತಾರ್ಕಿಕ ಚಿಂತನೆ ಹಾಗೂ ಹಸ್ತ-ನೇತ್ರಗಳ ಸಮನ್ವಯತೆಯನ್ನು ಹೆಚ್ಚಿಸುತ್ತವೆ. ಇವು ಕೇವಲ ಆಟಗಳಲ್ಲ, ಭವಿಷ್ಯದ ಕಲಿಕೆಗೆ ಹಾಕುವ ಭದ್ರ ಬುನಾದಿ ಎಂದು ಅಭಿಪ್ರಾಯಪಟ್ಟರು.

ಈ ಮೇಳದಲ್ಲಿ ಮಕ್ಕಳು ರೇಖೆಯ ಮೇಲೆ ನಡೆಯುವುದು, ಕಾಗದದ ವಿಮಾನಗಳನ್ನು ಮಡಚುವುದು ಮತ್ತು ತರಕಾರಿಗಳಿಗೆ ಬಣ್ಣ ಹಚ್ಚುವ ಮೂಲಕ ತಮ್ಮ ಚಲನಾ ಕೌಶಲಗಳನ್ನು ಪ್ರದರ್ಶಿಸಿದರು. ವಸ್ತುಗಳನ್ನು ಗಾತ್ರದ ಆಧಾರದಲ್ಲಿ ಜೋಡಿಸುವುದು, ಚಿತ್ರಗಳ ಜೋಡಿಗಳನ್ನು ಹೊಂದಿಸುವುದು ಹಾಗೂ ಬಣ್ಣಗಳ ವರ್ಗೀಕರಣದ ಮೂಲಕ ಮಕ್ಕಳ ತಾರ್ಕಿಕ ಶಕ್ತಿ ಪರೀಕ್ಷಿಸಲಾಯಿತು. ಗಣಿತದ ಭಯವನ್ನು ಹೋಗಲಾಡಿಸಲು 1 ರಿಂದ 9 ರವರೆಗಿನ ಅಂಕಿಗಳನ್ನು ಕುಪ್ಪಳಿಸುತ್ತಾ ಕಲಿಯುವ ವಿನೂತನ ಪದ್ಧತಿಯನ್ನು ಪರಿಚಯಿಸಲಾಯಿತು. ಭಾಷಾ ವಿಕಾಸ ವಿಭಾಗದಲ್ಲಿ ಚಿತ್ರಗಳನ್ನು ನೋಡಿ ಕಥೆ ಹೇಳುವ ಮೂಲಕ ಮಕ್ಕಳ ಸಂವಹನ ಕೌಶಲ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲಾಯಿತು.

ಈ ಮೇಳದ ವಿಶೇಷತೆಯೆಂದರೆ ‘ಮೇಳ ರಿಪೋರ್ಟ್ ಕಾರ್ಡ್’. ಪ್ರತಿ ಮಗುವಿನ ದೈಹಿಕ, ಬೌದ್ಧಿಕ ಹಾಗೂ ಸಾಮಾಜಿಕ ಪ್ರಗತಿಯನ್ನು ತಾಯಂದಿರೇ ಸ್ವತಃ ಮೌಲ್ಯಮಾಪನ ಮಾಡಿದರು. ತಾಯಂದಿರು ಶಿಕ್ಷಕರೊಂದಿಗೆ ಚರ್ಚಿಸಿ, ಮಗುವಿನ ಕಲಿಕಾ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಪ್ರಥಮ್ ಸಂಸ್ಥೆಯ ಚಂದ್ರಶೇಖರ್, ಶಿವಮೂರ್ತಿ, ದೇವನಹಳ್ಳಿ ಬ್ಲಾಕ್ ಟೀಮ್ ಲೀಡರ್ ಎ. ಮಂಜುನಾಥ್, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಗ್ರಾಮಸ್ಥರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ಉಪಸ್ಥಿತರಿದ್ದರು. ಹಸಿರು ತೋರಣಗಳಿಂದ ಸಿಂಗಾರಗೊಂಡಿದ್ದ ಶಾಲಾ ಆವರಣದಲ್ಲಿ ಮಕ್ಕಳು ತಮ್ಮ ತಾಯಂದಿರ ಕೈಹಿಡಿದು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಗ್ರಾಮೀಣ ಶಿಕ್ಷಣದ ಹೊಸ ಮುನ್ನುಡಿಗೆ ಸಾಕ್ಷಿಯಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version