ತಮಟೆ ಕಲಾವಿದ ಮುನಿವೆಂಕಟಪ್ಪ: ಜಪಾನ್, ಅಮೆರಿಕದಲ್ಲೂ ಮೊಳಗಿದ ತಮಟೆ ನಾದ

Sidlaghatta : ಪಿಂಡಿಪಾಪನಹಳ್ಳಿಯ ತಮಟೆ ಕಲಾವಿದ ಮುನಿವೆಂಕಟಪ್ಪ ಅವರು ತಮಟೆ ವಾದನದ ಮೂಲಕ ದೇಶ–ವಿದೇಶಗಳಲ್ಲಿ ಹೆಸರು ಮಾಡಿದ ಶಿಡ್ಲಘಟ್ಟ ತಾಲ್ಲೂಕಿನ ಕಲಾವಿದ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿ ಹಾಗೂ 2023ರ ಪದ್ಮಶ್ರೀ ಗೌರವ ಅವರಿಗೆ ಲಭಿಸಿದೆ.
ಸಂಕ್ಷಿಪ್ತ ಪರಿಚಯ
- ಹೆಸರು: ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (Pindipapanahalli Munivenkatappa)
- ಊರು: ಪಿಂಡಿಪಾಪನಹಳ್ಳಿ, ಶಿಡ್ಲಘಟ್ಟ ತಾಲ್ಲೂಕು
- ಪೋಷಕರು: ತಂದೆ ಪಾಪಣ್ಣ, ತಾಯಿ ಮುನಿಗಂಗಮ್ಮ
- ಕಲೆ: ತಮಟೆ ವಾದನ (Tamate, ಜಾನಪದ ಚರ್ಮವಾದ್ಯ)
- ಪ್ರಮುಖ ಗೌರವ: ಪದ್ಮಶ್ರೀ (2023), ‘ನಾಡೋಜ’ ಪ್ರಶಸ್ತಿ
ತಂದೆಯಿಂದ ಕಲಿತ ತಮಟೆ ವಿದ್ಯೆ
ಮುನಿವೆಂಕಟಪ್ಪ ಅವರದು ತೀರಾ ಬಡ ಕುಟುಂಬ. ತಂದೆಯಿಂದ ಕಲಿತ ತಮಟೆ ವಾದನವೇ ಬದುಕಿಗೆ ಆಸರೆಯಾಯಿತು. ನಾಲ್ಕನೇ ತರಗತಿಯವರೆಗೆ ಮಾತ್ರ ಶಾಲೆಗೆ ಹೋಗಿದ್ದರೂ, ಹತ್ತಾರು ವರ್ಷಗಳ ಶ್ರದ್ಧೆ, ಛಲ ಹಾಗೂ ಸಾಧನೆಯ ಫಲವಾಗಿ ತಮಟೆ ವಿದ್ಯೆ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿಯನ್ನು ತಂದುಕೊಟ್ಟಿತು.
ತಾನು ಏಕಲವ್ಯನಂತೆ ತಮಟೆ ಕಲೆಯನ್ನು ಕಲಿತರೂ, ದ್ರೋಣಾಚಾರ್ಯರಾಗಿ ಹಲವಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. ವೇದಿಕೆಯ ಮೇಲೆ ಹತ್ತು–ಹನ್ನೆರಡು ಸಹ ಕಲಾವಿದರ ತಂಡದೊಂದಿಗೆ ಕಾರ್ಯಕ್ರಮ ನೀಡುತ್ತಾರೆ. ಒಂದು ತಮಟೆ ಹಿಡಿದು ಗಂಟೆಗಟ್ಟಲೆ ಕಾರ್ಯಕ್ರಮ ನೀಡಬಲ್ಲ ಅವರಿಗೆ ಈ ಕಲೆಯ ಮೂವತ್ತಕ್ಕೂ ಹೆಚ್ಚು ವೈವಿಧ್ಯಮಯ ಮಜಲುಗಳು ಕರಗತವಾಗಿವೆ.
ಚರ್ಮದ ತಮಟೆಯ ಮೇಲಿನ ಪ್ರೀತಿ
ಈಗಿನ ಸುಧಾರಿತ ರೆಕ್ಸಿನ್ ತಮಟೆಗಿಂತ ಹಿಂದೆ ಬಳಕೆಯಲ್ಲಿದ್ದ ಚರ್ಮದ ತಮಟೆಯೇ ಮುನಿವೆಂಕಟಪ್ಪ ಅವರಿಗೆ ಪ್ರಿಯ. ಚರ್ಮವಾದ್ಯದಲ್ಲಿ ಹೊಮ್ಮುವ ನಾದದ ಗಮ್ಮತ್ತೇ ಬೇರೆ ಎಂಬುದು ಅವರ ಸ್ವಾನುಭವ. ಆದರೆ ಚರ್ಮದ ತಮಟೆ ತಯಾರಿಸಿ, ಕಾಯಿಸಿ ಹದ ಮಾಡುವ ತಾಳ್ಮೆ ಈಗ ಅಪರೂಪವಾಗಿದೆ.
ದೇಶ–ವಿದೇಶಗಳಲ್ಲಿ ಮೊಳಗಿದ ತಮಟೆ ನಾದ
ಮೈಸೂರು ದಸರೆ, ಹಂಪೆ ಉತ್ಸವ ಹಾಗೂ ಜಾನಪದ ಜಾತ್ರೆಗಳಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ಅವರ ತಮಟೆ ಸದ್ದು ಕೇಳುಗರಿಗೆ ಮೋಡಿ ಮಾಡಿದೆ. ದೆಹಲಿಯವರೆಗೂ ಅವರ ತಮಟೆ ನಾದ ತಲುಪಿದೆ.
- 1992: ಜಪಾನ್ ದೇಶದಲ್ಲಿ ಕನ್ನಡದ ಕೀರ್ತಿ ಬೆಳಗಿದರು
- 2014: ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಸ್ಯಾನ್‌ಹೊಸೆ ನಗರದಲ್ಲಿ ನಡೆದ ಎಂಟನೇ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದರು
- 2015: ಉತ್ತರ ಅಮೆರಿಕದ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಘಟನೆಯ ಮೂರನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ, ನಾರ್ತ್ ಕೆರೊಲಿನಾದ ರಾಲಿಯಲ್ಲಿ ಸುಮಾರು 1,500 ಕನ್ನಡಿಗರ ಮುಂದೆ ತಂಡದೊಂದಿಗೆ ತಮಟೆ ವಾದನ ನೀಡಿದರು
ಅಮೆರಿಕದ ವೇದಿಕೆಯಲ್ಲಿ ತಮಟೆ ಬಾರಿಸುತ್ತಲೇ ಕಣ್ಣಿನ ರೆಪ್ಪೆಗಳಿಂದ ನೋಟನ್ನು ಮತ್ತು ಗುಂಡು ಸೂಜಿಯನ್ನು ಮೇಲೆತ್ತುವ ಅವರ ಚಾಕಚಕ್ಯತೆ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಅವರ ತಮಟೆಯ ಗಂಡು ದನಿಗೆ ಮಾರುಹೋದ ಆಯೋಜಕರು ನೆನಪಿಗಾಗಿ ತಮಟೆಯನ್ನು ಕೇಳಿ ಪಡೆದರು. ಶಿಷ್ಯರಾದ ಮಧು, ಪ್ರಸನ್ನ ಮುಂತಾದವರು ಅವರೊಂದಿಗೆ ಅಮೆರಿಕಕ್ಕೆ ತೆರಳಿದ್ದರು.
ಪ್ರಶಸ್ತಿ–ಗೌರವಗಳು
- ಪದ್ಮಶ್ರೀ ಪ್ರಶಸ್ತಿ (2023)
- ‘ನಾಡೋಜ’ ಪ್ರಶಸ್ತಿ – ಹಂಪಿ ಕನ್ನಡ ವಿಶ್ವವಿದ್ಯಾಲಯ
- ಕನ್ನಡ ರಾಜ್ಯೋತ್ಸವ ಪ್ರಶಸ್ತಿ
- ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ
- ಮೈಸೂರು ದಸರಾ ಪ್ರಶಸ್ತಿ
- ಡಾ. ಎಲ್. ಬಸವರಾಜು ಪ್ರತಿಷ್ಠಾನ ಪ್ರಶಸ್ತಿ
- ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ
ನಮ್ಮ ವರದಿಗಳು
- 2010: ಪಿಂಡಿಪಾಪನಹಳ್ಳಿಯ ತಮಟೆ ಕಲಾವಿದ ಮುನಿವೆಂಕಟಪ್ಪ ಅವರಿಗೆ ಪ್ರಶಸ್ತಿ
- 2014: ಅಮೆರಿಕೆಯಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ
- 2015: ಅಮೆರಿಕೆಯ ‘ನಾವಿಕ’ದಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ
- 2015: ತಮಟೆವಾದನ ಜಾನಪದ ಕಲೆಯಲ್ಲಿ ಗಂಡು ಕಲೆ
- 2023: ಶಿಡ್ಲಘಟ್ಟ ತಾಲ್ಲೂಕಿನ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರಿಗೆ ಪದ್ಮಶ್ರೀ
- 2024: ವಿಶ್ವ ಕನ್ನಡ ಸಮ್ಮೇಳನದಲ್ಲಿ ಶಿಡ್ಲಘಟ್ಟದ ತಮಟೆ ನಾದ
ಇನ್ನಷ್ಟು ಸ್ಥಳೀಯ ಸಾಧಕರ ಪರಿಚಯಕ್ಕೆ ಶಿಡ್ಲಘಟ್ಟದ ಸಾಧಕರು ವಿಭಾಗ ನೋಡಿ.
ಮಾಹಿತಿ ಆಧಾರ: ಡಿ.ಜಿ. ಮಲ್ಲಿಕಾರ್ಜುನ ಅವರ ‘ನಮ್ಮ ಶಿಡ್ಲಘಟ್ಟ’ ಪುಸ್ತಕ (2017) ಹಾಗೂ ನಮ್ಮ ವರದಿಗಳು.
Summary in English
Munivenkatappa of Pindipapanahalli in Sidlaghatta taluk is a tamate (folk leather drum) artist who learned the art from his father in a poor family and, despite schooling only up to Class 4, became one of Karnataka’s best-known folk performers. He has performed at Mysuru Dasara and Hampi Utsava, in Japan (1992), at the 8th AKKA World Kannada Conference in San Jose (2014) and at the NAVIKA conference in North Carolina (2015). His honours include the Nadoja award of Hampi Kannada University, the Karnataka Janapada and Yakshagana Academy award, and the Padma Shri (2023).