Home Articles ರೇಷ್ಮೆ ನಗರಿಗೆ ಭೇಟಿನೀಡಿದ್ದ ವರನಟ ಡಾ.ರಾಜ್ ಕುಮಾರ್

ರೇಷ್ಮೆ ನಗರಿಗೆ ಭೇಟಿನೀಡಿದ್ದ ವರನಟ ಡಾ.ರಾಜ್ ಕುಮಾರ್

0

ಡಾ.ರಾಜ್ ಕುಮಾರ್ ಅವರ ಜನ್ಮದಿನವನ್ನು ಶನಿವಾರ ಅನೇಕ ಅಭಿಮಾನಿಗಳು ಸದ್ದಿಲ್ಲದೆ ಫೇಸ್ ಬುಕ್, ವ್ಯಾಟ್ಸಪ್ ಮೊದಲಾದ ಸಾಮಾಜಿಕ ಮಾದ್ಯಮಗಳ ಮೂಲಕ ಆಚರಿಸಿದರು. ಕೆಲವರು ಡಾ.ರಾಜ್ ಕುಮಾರ್ ಅವರ ವೀಡಿಯೋ, ಫೋಟೋ, ಧ್ವನಿಯನ್ನು ಹಂಚಿಕೊಂಡರೆ, ಕೆಲವರು ತಮ್ಮ ಬಳಿ ಜತನದಿಂದ ಕಾಪಾಡಿಕೊಂಡಿರುವ ಅಪರೂಪದ ಹಳೆಯ ಛಾಯಾಚಿತ್ರಗಳನ್ನು, ಡಾ.ರಾಜ್ ಅವರೊಂದಿಗೆ ತಾವು ಇರುವ ಅಪರೂಪದ ಛಾಯಾಚಿತ್ರಗಳನ್ನು ಹಂಚಿಕೊಂಡಿರುವರು.

 ಶಿಡ್ಲಘಟ್ಟ ತಾಲ್ಲೂಕಿಗೆ ಡಾ.ರಾಜ್ ಕುಮಾರ್ ಅವರ ಭೇಟಿ ಕೇವಲ ಒಂದು ಬಾರಿ ಮಾತ್ರ, ಅದೂ ಗೋಕಾಕ್ ಚಳುವಳಿಯ ಸಂದರ್ಭದಲ್ಲಿ. ಆಗ ಕೋಲಾರದ ಕಡೆಯಿಂದ ಆಗಮಿಸಿದ ಡಾ.ರಾಜ್ ಕುಮಾರ್ ಮತ್ತು ಇತರ ಚಲನಚಿತ್ರ ನಟರು ನಗರದ ವಿರೂಪಾಕ್ಷಪ್ಪ ಪ್ರೌಢಶಾಲೆಯ ಕಟ್ಟಡದ ಮೇಲೆ ನಿಂತು ಭಾಷಣ ಮಾಡಿದ್ದರು.

 ಆ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಕ್ರಿಯಾ ಸಮಿತಿಯ ಸಹಕಾರ್ಯದರ್ಶಿಯಾಗಿದ್ದ ರೂಪಸಿ ರಮೇಶ್, ಡಾ.ರಾಜ್ ಕುಮಾರ್ ಅವರ ಜೊತೆಯಲ್ಲಿನ ಅಪರೂಪದ ಛಾಯಾಚಿತ್ರವನ್ನು ತಮ್ಮಲ್ಲಿರಿಸಿಕೊಂಡಿದ್ದಾರೆ.

 “ಅಣ್ಣಾವ್ರು ಬರುತ್ತಿದ್ದಾರೆ ಸ್ವಾಗತಕ್ಕೆ ತಯಾರಿ ಮಾಡಿಕೊಳ್ಳಿ, ಅವರ ಊಟಕ್ಕೂ ಸಹ ಸಿದ್ಧತೆ ಮಾಡಿಕೊಳ್ಳಿ ಎಂಬುದಾಗಿ ನಮಗೆ  ಆ ದಿನ ಕೋಲಾರದಿಂದ ನಮಗೆ ಮಾಹಿತಿ ಬಂತು. ಆಗ ಕನ್ನಡ ಕ್ರಿಯಾ ಸಮಿತಿಯ ಎಸ್.ವಿ.ಅಯ್ಯರ್, ಖಂಡೇರಾವ್ ಮುಂತಾದವರೆಲ್ಲ ಸೇರಿಕೊಂಡು ಊಟಕ್ಕೆ ಸಿದ್ಧತೆ ಮಾಡಿಸಿದೆವು. ವಿರೂಪಾಕ್ಷಪ್ಪ ಪ್ರೌಢಶಾಲೆಯ ಕಟ್ಟಡದ ಮೇಲೆ ಸಣ್ಣದಾಗಿ ವೇದಿಕೆ ಮಾಡಿದ್ದೆವು. ಕಟ್ಟಡದ ಮೇಲೆ ಹತ್ತಲೆಂದು ಏಣಿ ಸಹ ಇರಿಸಿದ್ದೆವು. ಆದರೆ ಡಾ.ರಾಜ್ ಕುಮಾರ್ ಅವರು ಬಸ್ಸಿನಲ್ಲಿ ಬಂದವರು ಬಸ್ ಮೇಲಿನಿಂದಲೇ ಕಟ್ಟಡವನ್ನು ಏರಿಬಿಟ್ಟರು. ಭಾಷಾಭಿಮಾನವನ್ನು ಉದ್ದೀಪಿಸುವ ಅವರ ಭಾಷಣ ಮನಮುಟ್ಟುವಂತಿತ್ತು” ಎಂದು ಆ ದಿನವನ್ನು ನೆನಪಿಸಿಕೊಳ್ಳುತ್ತಾರೆ ರೂಪಸಿ ರಮೇಶ್.

 ಚಿಕ್ಕಬಳ್ಳಾಪುರ ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣ ನಂದಿ ಬೆಟ್ಟಕ್ಕೆ ಡಾ.ರಾಜ್ ಕುಮಾರ್ ಹಲವಾರು ಚಲನಚಿತ್ರಗಳ ಶೂಟಿಂಗ್ ಗಾಗಿ ಆಗಮಿಸಿದ್ದಾರೆ. ಆ ಸಂದರ್ಭದಲ್ಲಿನ ಅವರ ಹಲವಾರು ಛಾಯಾಚಿತ್ರಗಳನ್ನು ಭವಾನಿ ಲಕ್ಷ್ಮೀನಾರಾಯಣ್ ಅವರು ಕ್ಲಿಕ್ಕಿಸಿದ್ದು, ಡಾ.ರಾಜ್ ಕುಮಾರ್ ಅವರ ಅಪರೂಪದ ಚಿತ್ರಗಳನ್ನೊಳಗೊಂಡ ಪುಸ್ತಕವನ್ನು ಕೂಡ ಹೊರತಂದಿದ್ದಾರೆ.

ನಂದಿಬೆಟ್ಟಕ್ಕೆ ಆಕಸ್ಮಿಕ ಚಲನಚಿತ್ರದ ಶೂಟಿಂಗ್ ಗೆ ಬಂದಿದ್ದ ಡಾ.ರಾಜ್ ಕುಮಾರ್ ಅವರೊಂದಿಗೆ ಕೆ.ಆರ್.ಸಂಜಯ್

 ಡಾ.ರಾಜ್ ಕುಮಾರ್ ಅವರು ಆಕಸ್ಮಿಕ ಚಲನಚಿತ್ರದ ಶೂಟಿಂಗ್ ಗೆ ನಂದಿಬೆಟ್ಟಕ್ಕೆ ಬಂದಿದ್ದಾಗ ಅವರೊಂದಿಗೆ ಛಾಯಾಚಿತ್ರವನ್ನು ತೆಗೆಸಿಕೊಂಡ ಕೆ.ಆರ್.ಸಂಜಯ್, “ಆಗ ಯುವಕರಾಗಿದ್ದ ನಮಗೆ ಅಣ್ಣಾವ್ರು ಒಂದು ಸಿದ್ಧ ಮಾದರಿಯಿದ್ದಂತೆ ಇದ್ದರು. ಅವರನ್ನು ಬಹಳ ಅಭಿಮಾನಿಸುತ್ತಿದ್ದ ನಮಗೆಲ್ಲಾ ಅವರ ಚಲನಚಿತ್ರಗಳೇ ನಿಜವಾದ ಪಾಠಶಾಲೆಗಳಾಗಿದ್ದವು. ಅವರನ್ನು ಮಾತನಾಡಿಸಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದ ಸಂದರ್ಭವನ್ನು ಮರೆಯಲಾಗದು. ನಮ್ಮದು “ರಾಜ್ ಕುಮಾರ್ ಟ್ರಾನ್ಸ್ ಪೋರ್ಟ್” ಎಂಬ ಹೆಸರಿನ ಖಾಸಗಿ ಬಸ್ ವ್ಯವಹಾರ ಇದೆಯೆಂದು ಹೇಳಿದಾಗ ಖುಷಿಪಟ್ಟಿದ್ದರು” ಎಂದು ತಿಳಿಸಿದರು.   

-ಡಿ.ಜಿ.ಮಲ್ಲಿಕಾರ್ಜುನ

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version