
ಶಿಡ್ಲಘಟ್ಟ ತಾಲ್ಲೂಕಿನ ಕೋವಿಡ್ ಕೇರ್ ಕೇಂದ್ರಕ್ಕೆ ಶನಿವಾರ ಜಿಲ್ಲಾಧಿಕಾರಿ ಆರ್. ಲತಾ ಭೇಟಿ ನೀಡಿ ವೈದ್ಯರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಕೋವಿಡ್ ಪೀಡಿತ ರೋಗಿಗಳಿಗೆ ನೀಡುವ ರೆಮ್ಡೆಸಿವೀರ್ ಔಷಧಿ ಅಥವಾ ಬೆಡ್ಗಳ ಕೊರತೆ ಇಲ್ಲ. ಸಾರ್ವಜನಿಕರು ಅನಗತ್ಯವಾಗಿ ಭಯ ಪಡುವ ಬದಲು, ಕೋವಿಡ್ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸಿ ಕೊರೊನ ತೊಲಗಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ 13 ಮಂದಿ ಕೋವಿಡ್ ಸೋಂಕಿತರೊಂದಿಗೆ ವಿಡಿಯೋ ಸಂವಾದ ನಡೆಸಿ ಆರೋಗ್ಯ, ಯೋಗಕ್ಷೇಮ, ಆಸ್ಪತ್ರೆಯಲ್ಲಿ ಅವರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ನೀರು, ಔಷಧಿ ಮತ್ತು ಶುಚಿತ್ವ, ವೈದ್ಯರು, ನರ್ಸ್ ಗಳು ಉಪಚರಿಸುತ್ತಿರುವ ರೀತಿ ಹಾಗೂ ಸೌಲಭ್ಯಗಳ ಬಗ್ಗೆ ಖುದ್ದು ರೋಗಿಗಳಿಂದಲೆ ವಿವರಣೆಯನ್ನು ಪಡೆದರು. ಆಸ್ಪತ್ರೆಯಲ್ಲಿ ಇನ್ನು ಮುಂದೆ ಸಹ ಸೌಕರ್ಯಗಳಲ್ಲಿ ಯಾವುದೇ ರೀತಿಯ ಲೋಪ ಉಂಟಾಗದಂತೆ ಕ್ರಮವಹಿಸಲು ಆಸ್ಪತ್ರೆಯ ವೈದ್ಯರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ನಿಗದಿತ ಗುರಿಯಂತೆ ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ ಶೇ 50 ರಷ್ಟು ಜನರಿಗೆ ಕೊವಿಡ್ ಲಸಿಕೆ ಹಾಕಲಾಗಿದೆ. ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕಲಾಗುವುದು. ಹಳ್ಳಿಗಳಲ್ಲಿ ಜನರು ಮಾಸ್ಕ್ ಹಾಕುತ್ತಿಲ್ಲ. ಮಾಸ್ಕ್ ಧರಿಸದವರಿಗೆ ಕಡ್ಡಾಯವಾಗಿ ದಂಡ ಹಾಕಬೇಕು. ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ದಿನ ಕನಿಷ್ಠ 10 ಜನರಿಗೆ ದಂಡ ವಿಧಿಸಬೇಕು. ಪ್ರತಿ ನಗರ ಪ್ರದೇಶಗಳಲ್ಲಿ ಪ್ರತಿ ವಾರ್ಡ್ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಗ್ರಾಮಕ್ಕೆ ಒಂದು ಟಾಸ್ಕ್ ಫೋರ್ಸ್ ಸಮಿತಿ ಮಾಡಲಾಗಿದೆ. ಅಲ್ಲದೆ ಪ್ರತಿ ವಾರ್ಡು ಹಾಗೂ ಪ್ರತಿ ಗ್ರಾಮಕ್ಕೆ ಒಬ್ಬರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಈ ಟಾಸ್ಕ್ ಫೋರ್ಸ್ ಸಮಿತಿಗಳು ಯೋಜನೆ ರೂಪಿಸಿಕೊಂಡು ಪ್ರತಿ ಮನೆ ಮನೆಗೆ ಭೇಟಿ ನೀಡಿ ಎಷ್ಟು ಜನರಿಗೆ ಲಸಿಕೆ ಹಾಕಲಾಗಿದೆ, ದಾಖಲಾಗಿರುವ ಕೋವಿಡ್ ಪ್ರಕರಣಗಳು ಎಷ್ಟು, ಸಕ್ರಿಯ ಪ್ರಕರಣಗಳು ಎಷ್ಟು ಎಂಬ ಎಲ್ಲ ಮಾಹಿತಿಯನ್ನು ಪಡೆಯಬೇಕು.
ಕೋವಿಡ್ ಸೋಂಕು ತಗುಲಿದವರ ಸಂಪರ್ಕಕ್ಕೆ ಬಂದ ಪ್ರಥಮ, ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಪ್ರತ್ಯೇಕ ಹೋಮ್ ಐಸೋಲೇಷನ್ ತಂಡವನ್ನು ರಚಿಸಿ ಪ್ರಥಮ ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ವಹಿಸಬೇಕು. ಆಶಾ ಕರ್ತೆಯರು, ಅಂಗನವಾಡಿ ಶಿಕ್ಷಕರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮಸಹಾಯಕರು, ಸಿಬ್ಬಂದಿಗಳನ್ನು ಸಮಿತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪರಿಣಾಮಕಾರಿಯಾಗಿ ಕೊರೊನ ನಿಯಂತ್ರಣ ಕ್ರಮಗಳನ್ನು ಜರುಗಿಸಬೇಕು ಎಂದರು.
ಕೋವಿಡ್ ನಿಯಂತ್ರಿಸಲು ಆರೋಗ್ಯ ಇಲಾಖೆಯ ಅಧಿಕಾರಿಗಳು, ವೈದ್ಯರು, ದಾದಿಯರ ಮತ್ತು ಸಹಾಯಕ ಸಿಬ್ಬಂದಿಗಳ ಪಾತ್ರ ಬಹಳ ಅತ್ಯವಶ್ಯಕ ಹಾಗೂ ಅತ್ಯಮೂಲ್ಯವಾಗಿದ್ದು ಎಲ್ಲರೂ ಕಾರ್ಯ ಕೇಂದ್ರ ಸ್ಥಳದಲ್ಲಿದ್ದು ಕೆಲಸ ಮಾಡುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಕೆ. ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ರಘುನಂದನ್, ಕೋವಿಡ್ ನೋಡಲ್ ಅಧಿಕಾರಿ ಯಶಸ್ವಿನಿ, ತಹಶೀಲ್ದಾರ್ ರಾಜೀವ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಡಾ.ಗುರು ಹಾಜರಿದ್ದರು.