ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಶುಕ್ರವಾರ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತ ಚಲಪತಿ ಮಾತನಾಡಿದರು.
ಜಿಲ್ಲಾಧಿಕಾರಿಗಳ ಮೂಲಕ ಶಿಡ್ಲಘಟ್ಟ ಗ್ರಂಥಾಲಯದ ನೂತನ ಕಟ್ಟಡಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಇನ್ಫೋಸಿಸ್ ಫೌಂಡೇಶನ್ ಅವರು ಕಟ್ಟಡ ಕಟ್ಟಿಕೊಡಲು ಮುಂದೆ ಬಂದಿರುವುದು ಅತ್ಯಂತ ಸಂತಸದ ವಿಚಾರ. ಪತ್ರ ವ್ಯವಹಾರಗಳು ಪೂರ್ಣಗೊಳ್ಳುತ್ತಿದ್ದಂತೆ ಆರು ತಿಂಗಳೊಳಗೆ ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣವಾಗಲಿದೆ ಎಂದು ಅವರು ತಿಳಿಸಿದರು.
ಗ್ರಂಥಾಲಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ದೇಗುಲವಿದ್ದಂತೆ. ಇಲ್ಲಿಗೆ ಬರುವ ಓದುಗರು ತಮ್ಮೊಂದಿಗೆ ತಮ್ಮ ಸ್ನೇಹಿತರು ಹಾಗೂ ಬಂಧುಗಳನ್ನು ಕರೆತರಬೇಕು. ಓದುಗರ ಸಂಖ್ಯೆ ಹೆಚ್ಚಬೇಕು. ಪ್ರತಿ ಮನೆಯವರೂ ಗ್ರಂಥಾಲಯದಲ್ಲಿ ಸದಸ್ಯತ್ವವನ್ನು ಹೊಂದುವಂತಾಗಬೇಕು. ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವವರು ಇಲ್ಲಿರುವ ಪುಸ್ತಕಗಳಿಂದ ಸಾಕಷ್ಟು ಪ್ರಯೋಜನವನ್ನು ಹೊಂದಬಹುದಾಗಿದೆ ಎಂದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಗ್ರಂಥಾಲಯ ಮತ್ತು ಪುಸ್ತಕಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನವೆಂಬರ್ 14ರಿಂದ 20ರವರೆಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಿಸಲಾಗುತ್ತಿದೆ. ಗ್ರಂಥಾಲಯಗಳ ಬೆಳವಣಿಗೆಗೆ ಶ್ರಮಿಸಿದ್ದ ಎಸ್.ಆರ್.ರಂಗನಾಥನ್ ಅವರನ್ನು ಭಾರತದ ಗ್ರಂಥಾಲಯ ಪಿತಾಮಹ ಎಂದು ಕರೆಯಲಾಗುತ್ತದೆ. ಇಂಡಿಯನ್ ಲೈಬ್ರರಿ ಅಸೋಸಿಯೇಷನ್ ನಿರ್ಧಾರದಂತೆ ದೇಶದಲ್ಲಿ ೧೯೬೮ ರಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಪ್ರಾರಂಭವಾಗಿ ೫೦ ವರ್ಷಗಳಾಗಿವೆ. ಓದುಗರನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳೂ ಗ್ರಂಥಾಲಯದಲ್ಲಿ ಸ್ಥಳೀಯ ಲೇಖಕರನ್ನು ಪರಿಚಯಿಸುವ ಕೆಲಸವನ್ನು ಕನ್ನಡ ಸಾರಸ್ವತ ಪರಿಚಾರಿಕೆ ಮಾಡುತ್ತಿದೆ ಎಂದರು.
ಗ್ರಂಥಪಾಲಕಿ ರಾಮಲೀಲಾ ಮಾತನಾಡಿ, ನಮ್ಮ ಶಾಖಾ ಗ್ರಂಥಾಲಯದಲ್ಲಿ ಅತ್ಯುತ್ತಮ ಪುಸ್ತಕಗಳಿವೆ. ಮನೆಮನೆಗೂ ತಿರುಗಿ ನಾವು ಸುಮಾರು ಇನ್ನೂರು ಮಂದಿಯ ಸದಸ್ಯತ್ವವನ್ನು ಮಾಡಿಸಿದ್ದೇವೆ. ಶಾಲಾ ಕಾಲೇಜುಗಳು ವಿದ್ಯಾರ್ಥಿಗಳು ಗ್ರಂಥಾಲಯದ ಕಡೆ ಬರಬೇಕು. ಕೇವಲ ಶಾಲಾ ಕಾಲೇಜುಗಳಿಗೆ ಮಾತ್ರ ಸೀಮಿತರಾಗಬಾರದು. ಪಠ್ಯ ಪುಸ್ತಕದ ಹೊರತಾಗಿಯೂ ಪುಸ್ತಕಗಳನ್ನು ಓದಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚು ಜ್ಞಾನ ಅವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಂಥಾಲಯದ ವತಿಯಿಂದ ನಗರಸಭೆ ಆಯುಕ್ತ ಚಲಪತಿ ಮತ್ತು ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ಗ್ರಂಥಾಲಯ ಸಹಾಯಕಿ ಬಾಂಧವ್ಯ, ಶಿಲ್ಪಾ, ಗಂಗಾಧರಪ್ಪ, ವೀರಭದ್ರಪ್ಪ, ವೃಷಬೇಂದ್ರಪ್ಪ, ನಯಾಜ್ ಹಾಜರಿದ್ದರು.
- Advertisement -
- Advertisement -
- Advertisement -