ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ನಟ ಅಂಬರೀಶ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಅವರು ಮಾತನಾಡಿದರು.
ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅತ್ಯಂತ ಹೃದಯವಂತ ವ್ಯಕ್ತಿ ಎಂದೇ ಹೆಸರಾಗಿದ್ದರು. ಅವರ ನಿಧನದಿಂದ ಕನ್ನಡ ಚಿತ್ರರಂಗ ಕಂಗಾಲಾಗಿದೆ ಎಂದು ಅವರು ತಿಳಿಸಿದರು.
ಕನ್ನಡ ನಾಡು ನುಡಿಗಾಗಿ ಅಪಾರ ಪ್ರೀತಿಯನ್ನು ಹೊಂದಿದ್ದ ಅಂಬರೀಶ್ ಗೋಕಾಕ್ ಚಳವಳಿಯಲ್ಲೂ ಪಾಲ್ಗೊಂಡಿದ್ದರು. ಡಾ.ರಾಜ್ ಕುಮಾರ್ ಅವರ ನಂತರ ಚಿತ್ರರಂಗದಲ್ಲಿ ದುಡಿಯುವವರ ಪರವಾಗಿ ನಾಯಕತ್ವವನ್ನು ವಹಿಸಿಕೊಂಡು ಅಣ್ಣನಂತಿದ್ದರು. ಯಾವುದೇ ಕ್ಲಿಷ್ಟಕರ ಸಮಸ್ಯೆಯಿದ್ದರೂ ಪರಿಹರಿಸುವ ಗುಣ ಅವರಲ್ಲಿತ್ತು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಅಂಬರೀಶ್ ಅವರು ತಮ್ಮ ಚಲನಚಿತ್ರದ ಮೂಲಕ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸುವುದನ್ನು ತೋರಿಸಿಕೊಟ್ಟರು. ವ್ಯವಸ್ಥೆಯ ಲೋಪದೋಷಗಳನ್ನು ತೋರಿಸಿ ತಿದ್ದುವ ಕೆಲಸವನ್ನು ಮಾಡುವ ಮೂಲಕ ಜನರ ಆಶೋತ್ತರಗಳಿಗೆ ದನಿಯಾಗಿದ್ದರು ಎಂದರು.
ಚಲನಚಿತ್ರ ನಟ ಸಿ.ಎನ್.ಮುನಿರಾಜು ಮಾತನಾಡಿ, ಅಂಬರೀಶ್ ಅವರ ನಟನೆಯಿಂದ ಪ್ರೇರಣೆ ಹೊಂದಿದ ನಟರಲ್ಲಿ ನಾನೂ ಒಬ್ಬ. ಅವರ ನಿಧನ ಕಲಾವಿದರಿಗೆ ನೋವನ್ನು ತಂದಿದೆ ಎಂದು ಹೇಳಿದರು.
ಗ್ರಂಥಪಾಲಕಿ ರಾಮಲೀಲಾ, ಸಹಾಯಕಿ ಬಾಂಧವ್ಯ, ಓದುಗರಾದ ಮುಕ್ತಿಯಾರ್ ಪಾಷ, ನಾರಾಯಣಸ್ವಾಮಿ ಹಾಜರಿದ್ದರು.
- Advertisement -
- Advertisement -
- Advertisement -