ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ, ತಾರ್ಕಿಕತೆ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸುವ ಮೂಲಕ ಅವರಲ್ಲಿ ಸಂತಸದ ಕಲಿಕೆ ಹಾಗೂ ಕುತೂಹಲ ಕೆರಳಿಸುವ ಚಟುವಟಿಕೆಯಾಧಾರಿತ ಕಲಿಕೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಮಕ್ಕಳ ವಿಜ್ಞಾನ ಹಬ್ಬವನ್ನು ಆಯೋಜಿಸಿರುವುದಾಗಿ ಸಿ.ಡಿ.ಪಿ.ಒ ವೈ.ನಾಗಮಣಿ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ರಾಜ್ಯ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಮಕ್ಕಳ ವಿಜ್ಞಾನ ಹಬ್ಬ 2019 – 20 ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಗು ತನ್ನ ಬಾಲ್ಯವನ್ನು ಸಂಭ್ರಮಿಸಬೇಕೆಂದರೆ ಕಲಿಕೆಯು ಹಬ್ಬವಾಗಬೇಕು. ಅಪರಿಮಿತ ಸ್ವಾತಂತ್ರ್ಯ ಮತ್ತು ಸಂತೋಷ ಮಾತ್ರ ಮಗುವಿಗೆ ಹಬ್ಬದ ಸಡಗರವನ್ನುಂಟು ಮಾಡಬಲ್ಲದು. ತನ್ನದೇ ಲೋಕವೊಂದನ್ನು ವಿಸ್ತರಿಸಿಕೊಳ್ಳುತ್ತಾ ಮಗು ಎಲ್ಲ ಸೀಮೆಗಳನ್ನು ಉಲ್ಲಂಘಿಸಿ ವಿಶ್ವಮಾನವನಾಗಲು ಇಂತಹ ಸಡಗರ ಅನಿವಾರ್ಯ. ವಿಜ್ಞಾನವು ಅತ್ಯಂತ ಕ್ಷಿಪ್ರವಾಗಿ ಗುರಿಯತ್ತ ಕೊಂಡೊಯ್ಯಬಲ್ಲ ದಾರಿ- ಬದುಕಿನ ದಾರಿ ಎಂದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಪ್ರತಿ ಮಕ್ಕಳಲ್ಲಿ ವಿಶೇಷ ಜ್ಞಾನಸಕ್ತಿ ಅಡಗಿದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅವಶ್ಯವಾಗಿದೆ. ಪಠ್ಯೇತರ ಚಟುವಟಿಕೆಗಳಿಗೆ ಮಕ್ಕಳ ವಿಜ್ಞಾನ ಹಬ್ಬ ಪ್ರೇರಣೆಯಾಗಿದ್ದು, ಅದರಲ್ಲಿಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳುವುದರ ಮೂಲಕ ಕಲಿಕೆ ಗುಣಮಟ್ಟ ಹೆಚ್ಚಿಸಲು ಸಾಧ್ಯವಿದೆ ಎಂದರು.
ಎಲ್ಲೆಡೆ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ಭಯ ಬೇಡ ಎಚ್ಚರವಿರಲಿ ಎಂದು ಹೇಳಿ, ಸೋಂಕಿನ ಲಕ್ಷಣಗಳು ಹಾಗೂ ರೋಗ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ವಿವರಿಸಿ ಅದಕ್ಕೆ ಸಂಬಂಧಿಸಿದ ಕರಪತ್ರವನ್ನು ವಿತರಿಸಿ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.
“ಹಬ್ಬದ ಮುನ್ನ”, “ಸಂಘಟನೆ”, “ಚುಕ್ಕಿ ಚಂದ್ರಮ”, “ಊರು ತಿಳಿಯೋಣ”, “ಮಾಡು ಆಡು”, “ಕಾಗದ ಕತ್ತರಿ”, “ಹಾಡು ಆಡು”, “ಆಡು ಆಟವಾಡು”, “ಅಕ್ಷರದಾಟ” ಮೊದಲಾದ ಹೆಸರಿನ ವಿಜ್ಞಾನ ಚಟುವಟಿಕೆಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ರಾಜೀವಗೌಡ ಮತ್ತು ಎಂ.ದೇವರಾಜ್ ಮಕ್ಕಳಿಗೆ ಕಲಿಸಿದರು. ಆರು ಶಾಲೆಗಳ ಸುಮಾರು 110 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಎ.ಸಿ.ಡಿ.ಪಿ.ಒ ಮಹೇಶ್, ಸಿ.ಡಿ.ಪಿ.ಒ ಕಚೇರಿಯ ಮೇಲ್ವಿಚಾರಕಿಯರು, ಶಿಕ್ಷಕರಾದ ಚಂದ್ರಕಲಾ, ರಮೇಶ್, ಮುನಿರಾಜು, ಚಂದ್ರಶೇಖರ್ ಹಾಜರಿದ್ದರು.
- Advertisement -
- Advertisement -
- Advertisement -