
Appegowdanahalli, Sidlaghatta : ಪ್ರತಿ ಹಬ್ಬವನ್ನು ಆಚರಿಸುವುದರ ಹಿಂದೆ ಸಂಪ್ರದಾಯ, ಆಚಾರ ವಿಚಾರಗಳು ಅಡಗಿದ್ದು ಅವುಗಳ ಬಗ್ಗೆ ನಾವು ಸರಿಯಾಗಿ ತಿಳಿದುಕೊಳ್ಳದೆ ಆಚರಿಸುವುದು ತಪ್ಪು. ಹಬ್ಬ ಹರಿದಿನಗಳ ಆಚರಣೆಯ ಅರ್ಥವನ್ನು ನಾವು ತಿಳಿದುಕೊಂಡು ನಮ್ಮ ಮಕ್ಕಳಿಗೂ ತಿಳಿಸುವ ಕೆಲಸ ಆಗಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಎ.ಲಕ್ಷ್ಮಿನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿಯ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಗ್ರಾಮದ ಮಹಿಳೆಯರಿಗೆ ರಂಗೋಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ನಾವು ಆಚರಿಸುವ ಸಾಕಷ್ಟು ಹಬ್ಬಗಳು ಕೇವಲ ಸಾಂಪ್ರದಾಯಹಿಕವಾಗಿ ಮಾತ್ರ ಮಹತ್ವ ಪಡೆಯದೆ ನಮ್ಮ ಆರೋಗ್ಯ, ಬದುಕಿನ ಮೇಲೂ ಪ್ರಭಾವ ಬೀರುತ್ತದೆ. ಅದನ್ನು ತಿಳಿದುಕೊಂಡು ನಾವು ಹಬ್ಬ ಹರಿದಿನಗಳನ್ನು ಸಾಂಪ್ರದಾಯಿಕವಾಗಿ ಆಚರಿಸುವಂತಾಗಬೇಕೆಂದರು.
ಮಹಿಳೆಯರಲ್ಲೂ ಹಲವು ರೀತಿಯ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರ್ತಿಸುವ ಕೆಲಸ ಆಗಬೇಕಿದೆ. ಮೊದಲಿಗೆ ಕುಟುಂಬದವರು ಗುರ್ತಿಸುವ ಕೆಲಸ ಆದಾಗ ಮಾತ್ರ ಸಮಾಜವೂ ಮಹಿಳೆಯಲ್ಲಿನ ಪ್ರತಿಭೆ, ಆಸಕ್ತಿಯನ್ನು ಗುರ್ತಿಸಿ ಅವಕಾಶವನ್ನು ಒದಗಿಸಿಕೊಡುವ ಮೂಲಕ ಪ್ರಗತಿಗೆ ಕಾರಣವಾಗುತ್ತದೆ ಎಂದರು.
100ಕ್ಕೂ ಹೆಚ್ಚು ಮಹಿಳೆಯರು ನಾನಾ ರೀತಿಯ ರಂಗೋಲೆಗಳನ್ನು ಬಿಡಿಸಿದ್ದರು. ಈಶಾ ಶಿವ, ಲಿಂಗ, ಕೃಷಿಯಲ್ಲಿ ತೊಡಗಿದ ಕೃಷಿ ಕುಟುಂಬ, ವಿವಿಧ ಧಾನ್ಯಗಳಿಂದ ಬಿಡಿಸಿದ ರಂಗೋಲೆಗಳು ಗಮನ ಸೆಳೆದವು.
ದಿವ್ಯಗೆ ಮೊದಲ ಬಹುಮಾನವಾಗಿ ಟಿವಿ, ಮುನಿರತ್ನಮ್ಮಗೆ ದ್ವಿತೀಯ ಬಹುಮಾನವಾಗಿ ಹಾಟ್ ಬಾಕ್ಸ್ ಸೆಟ್ ಹಾಗೂ ತೃತೀಯ ಬಹುಮಾನ ಪಡೆದ ಮುನಿರತ್ನಮ್ಮಗೆ ಮಿಕ್ಸಿ ಜಾರ್ ಸೆಟ್ ನೀಡಲಾಯಿತು. ಇನ್ನುಳಿದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.
ಮುಖಂಡರಾದ ನಾಗೇಶ್, ಕೇಶವ, ಸೋನು, ವೆಂಕಟೇಶ್, ಹನುಮಂತರೆಡ್ಡಿ, ಶ್ರೀನಿವಾಸ್, ಮುನಿರೆಡ್ಡಿ, ಶ್ರೀರಾಮಬಾಬು ಹಾಜರಿದ್ದರು.