ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಬಳಿ ತಿಂಡಿಗಾಗಿ ಮತ್ತು ದಣಿವು ನಿವಾರಿಸಿಕೊಳ್ಳಲೆಂದು ಕೆಲ ಕಾಲ ಸೈಕಲ್ ನಿಲ್ಲಿಸಿದ್ದ ಸಂದರ್ಭದಲ್ಲಿ ಬೆಂಗಳೂರು ರಾಂಡೋನಿಯರ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಸುಬ್ರಮಣ್ಯಂ ಮಾತನಾಡಿದರು.
ನೂರು ವರ್ಷಗಳ ಹಿಂದೆ ಫ್ರಾನ್ಸ್ ದೇಶದಲ್ಲಿ ಬಹುದೂರದ ಸೈಕ್ಲಿಂಗ್ ಕ್ರೀಡೆ ಆರಂಭವಾಯಿತು. ಅದನ್ನು ರಾಂಡೋನ್ಯೂರಿಂಗ್ ಎಂದು ಕರೆಯುವರು. ಪ್ರಪಂಚದಾದ್ಯಂತ ರಾಂಡೋನ್ಯೂರಿಂಗ್ ಶತಮಾನೋತ್ಸವದ ಆಚರಣೆಯ ಸವಿನೆನಪಿಗಾಗಿ ನೂರಕ್ಕೂ ಹೆಚ್ಚು ಕಿ.ಮೀ ದೂರದ ಸೈಕ್ಲಿಂಗ್ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ರಾಂಡೋನಿಯರ್ಸ್ ಕ್ಲಬ್ ವತಿಯಿಂದ 200 ಕಿ.ಮೀ (13.5 ಗಂಟೆ) ದೂರದ ಸೈಕ್ಲಿಂಗ್ ಆಯೋಜಿಸಿದ್ದೇವೆ. ಬೆಂಗಳೂರಿನಿಂದ ಪ್ರಾರಂಭಗೊಂಡು, ಹೊಸಕೋಟೆ, ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ದೇವನಹಳ್ಳಿ ಮೂಲಕ ಬೆಂಗಳೂರು ತಲುಪುತ್ತೇವೆ. ರಾಂಡೋನಿಯರ್ಸ್ ಸೆಪ್ಟೆಂಬರ್ 11, 2021 ರಂದು ವೈಭವದ ಶತಮಾನೋತ್ಸವ ಆಚರಿಸುತ್ತಿದೆ. ಇದರ ಪ್ರಯುಕ್ತ 400ಕ್ಕೂ ಹೆಚ್ಚು ಸೈಕಲ್ ಸವಾರರು ಈ ಮಹಾ ಕೂಟದಲ್ಲಿ ಭಾಗಿಯಾಗುತ್ತಿದ್ದಾರೆ. ಸವಾರರನ್ನು ತಲಾ 200 ಜನರ 2 ಗುಂಪುಗಳಾಗಿ ವಿಭಜಿಸಲಾಗಿದೆ. ಯುವಕರು, ಮಹಿಳೆಯರು, ವೃದ್ಧರು ಎಲ್ಲರೂ ಇದ್ದಾರೆ. ಈ ಕಾರ್ಯಕ್ರಮಕ್ಕೆ ಬೆಳಗ್ಗೆ ಬೆಂಗಳೂರಿನಲ್ಲಿ ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಪೆರಿಕಲ್ ಸುಂದರ್ ಮತ್ತು ಎಡಿಜಿಪಿ ಭಾಸ್ಕರ್ ರಾವ್ ಚಾಲನೆ ನೀಡಿದರು. ಈ ದಿನ ಸೈಕ್ಲಿಂಗ್ ನಲ್ಲಿ ಭಾಗಿಯಾದವರಿಗೆ ಫ್ರಾನ್ಸ್ ದೇಶದಿಂದ ಮೆಡಲ್ ಕಳುಹಿಸುತ್ತಾರೆ ಎಂದು ಹೇಳಿದರು.
ಹಿನ್ನೆಲೆ:
ಸೆಪ್ಟೆಂಬರ್ 11, 1921 (ಭಾನುವಾರ) ದಂದು, ಫ್ರಾನ್ಸ್ ದೇಶದಲ್ಲಿ ಔಡಾಕ್ಸ್ ಕ್ಲಬ್ ಪ್ಯಾರಿಸಿಯನ್ ತನ್ನ ಮೊದಲ ಬ್ರೀವೆಟ್ (ಬಿ.ಆರ್.ಎಂ) ಅನ್ನು 200 ಕಿ.ಮೀ ಲೂಪ್ ನಲ್ಲಿ ಆಯೋಜಿಸಿತ್ತು. ಪ್ಯಾರಿಸ್ – ಡ್ರೀಕ್ಸ್ – ಚಾರ್ಟ್ರೆಸ್ – ಪ್ಯಾರಿಸ್ ಮೂಲಕ ಸುಮಾರು ಇಪ್ಪತ್ತಾರು ಸೈಕಲ್ ಸವಾರರು ತಮ್ಮ ಮೊದಲ ಬ್ರೀವೆಟ್ ಅನ್ನು ಮುಗಿಸಿದರು. ಅಂದಿನಿಂದ ಇಂದಿನವರೆಗೆ ಇದು ನಿರಂತರವಾಗಿ ನಡೆಯುತ್ತಿದೆ.
ಈ ಸೈಕಲ್ ಸವಾರಿಯು ದೂರ ಪ್ರಯಾಣದ 200, 300, 400, 600 ಮತ್ತು 1000 ಕಿಮೀಗಳ ಸವಾರಿಯೊಂದಿಗೆ ದೂರದ ಸೈಕ್ಲಿಂಗ್ ಆಗಿದೆ. ಇದನ್ನು ಬ್ರೆವೆಟ್ಸ್ ಡಿ ರಾಂಡೋನಿಯರ್ಸ್ ಮೊಂಡಿಯಾಕ್ಸ್ (ಬಿ.ಆರ್.ಎಂ) ಎಂದು ಕರೆಯಲಾಗುತ್ತದೆ. ದೂರ ಸೈಕಲ್ ಸವಾರಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸುದೀರ್ಘ ಸಂಪ್ರದಾಯದ ಭಾಗವಾಗಿದ್ದು ಫ್ರಾನ್ಸ್ ಮತ್ತು ಇಟಲಿಯು ಸೈಕ್ಲಿಂಗ್ ಕ್ರೀಡೆಯ ಮೂಲ ಆಗಿದೆ.
ರಾಂಡೋನಿಯರ್ಸ್ (ಬಿ.ಆರ್.ಎಂ) 2010 ರಲ್ಲಿ ಔಡಾಕ್ಸ್ ಇಂಡಿಯಾ ರಾಂಡೋನಿಯರ್ಸ್ (ಎ.ಐ.ಆರ್) ಅಡಿಯಲ್ಲಿ ಭಾರತದಲ್ಲಿ ಅಸ್ತಿತ್ವಕ್ಕೆ ಬಂದಿತು. ಬಿ.ಆರ್.ಎಂ ಅನ್ನು ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಿಂದ ನಡೆಸಲಾಗುತ್ತಿದೆ ಮತ್ತು ದೂರದ ಸೈಕ್ಲಿಂಗ್ ಕಾರ್ಯಕ್ರಮಗಳನ್ನು ಆಯೋಜಿಸುವ ಆರಂಭಿಕ ನಗರಗಳಲ್ಲಿ ಒಂದಾಗಿದೆ. ರಾಂಡೋನಿಯರ್ಸ್ ಸಮುದಾಯವು ಕಳೆದ 3-4 ವರ್ಷಗಳಲ್ಲಿ 10 ಪಟ್ಟು ಬೆಳೆದಿದೆ ಮತ್ತು 750 ಹೆಚ್ಚಿನ ಸಕ್ರಿಯ ಸದಸ್ಯರನ್ನು ಹೊಂದಿದೆ ಎಂದರು.