
Sidlaghatta: ಭಾರತದಲ್ಲಿರುವ ಎಲ್ಲ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೆ. ಆದರೆ ಕೆಲ ಮುಸ್ಲೀಮರಿಗೆ ಪಾಕಿಸ್ತಾನದ ಬಗ್ಗೆ ಅಂಧ ಪ್ರೇಮವಿದೆ. ಅಂತಹವರು ಭಾರತವನ್ನು ಬಿಟ್ಟು ತೊಲಗಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಿ. ಇಲ್ಲಿದ್ದ ಮೇಲೆ ಎಲ್ಲರೂ ವಿಕಸಿತ ಭಾರತಕ್ಕಾಗಿ ಕೈ ಜೋಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ 12 ವರ್ಷ (4399 ದಿನಗಳು) ಪೂರೈಸಿ ಮುಂದುವರೆದಿರುವ ಅಂಗವಾಗಿ ಬಿಜೆಪಿಯಿಂದ ನಗರದ ಕೋಟೆ ಶ್ರೀರಾಮ ದೇವಾಲಯದಲ್ಲಿ ವಿಶೇಷ ಪೂಜೆ, ಸ್ವಚ್ಚತಾ ಕಾರ್ಯ, ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತದಲ್ಲಿ ನೆಲೆಸಿ ಇಲ್ಲಿನ ನೀರು ಕುಡಿದು ಗಾಳಿ ಸೇವಿಸಿ ಅನ್ನ ತಿಂದ ಮೇಲೆ ಭಾರತಕ್ಕೆ ತಲೆ ಬಾಗಬೇಕು, ಭಾರತವನ್ನು ಪ್ರೀತಿಸಬೇಕು, ಭಾರತದ ಕಾನೂನನ್ನು ಗೌರವಿಸಬೇಕು. ಅದು ಬಿಟ್ಟು ಕೆಲವರಿಗೆ ಪಾಕಿಸ್ತಾನದ ಮೇಲೆ ಎಲ್ಲಿಲ್ಲದ ಮಮಕಾರ, ಪ್ರೀತಿ, ಅಂಧ ಪ್ರೇಮ ಇರುತ್ತದೆ. ಅಂತಹವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಿ ಅಲ್ಲೇ ನೆಲೆಸಲಿ ನಮ್ಮದೇನು ಅಭ್ಯಂತರ ಇಲ್ಲ ಎಂದರು.
ನಮ್ಮ ನೆರೆಯ ಆಂಧ್ರದ ಗಡಿಯಲ್ಲಿ ಕೃಷ್ಣಾ ನದಿ ನೀರು ಹರಿಯುತ್ತಿದ್ದು ಕೃಷ್ಣಾ ನದಿ ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿಗೆ ಹರಿಸಬೇಕಿದೆ. ಆದರೆ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಹಿತಾಸಕ್ತಿಯೆ ಇಲ್ಲವಾಗಿದೆ ಎಂದು ದೂರಿದರು.
ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಎಲ್ಲ ನಾಯಕರು ಒಗ್ಗೂಡಿ ಕೃಷ್ಣಾ ನದಿ ನೀರನ್ನು ಈ ಭಾಗಕ್ಕೆ ಹರಿಸಿ ಕೃಷಿಕರಿಗೆ ಅನುಕೂಲ ಮಾಡಿಕೊಡುವುದು ಶತಸಿದ್ಧ ಎಂದರು.
ಇದೀಗ ರಾಜ್ಯದಲ್ಲಿರುವ ಮತ್ತು ಈ ಹಿಂದೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಜನ ಹಿತಕ್ಕಿಂತಲೂ ಸ್ವಾರ್ಥ, ಪಕ್ಷದ ಹಿತ ಮುಖ್ಯವಾಗಿತ್ತು. ಹಾಗಾಗಿ ದೇಶದ ಅಭಿವೃದ್ದಿ ಮಾಡಿದ್ದಕ್ಕಿಂತ ಸ್ವಂತ ಅಭಿವೃದ್ದಿ ಆಗಿದ್ದೇ ಹೆಚ್ಚು ಎಂದು ವ್ಯಂಗ್ಯವಾಡಿದರು.
ಆದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ 370 ಕಾಯಿದೆಯನ್ನು ರದ್ದುಪಡಿಸಿ ಇಡೀ ದೇಶ ಒಂದು, ಒಂದೇ ಕಾನೂನು ಎಂಬುದನ್ನು ಜಗತ್ತಿಗೆ ಸಾರಲಾಯಿತು. ಹಾಗೆಯೆ ಇದೀಗ ಬಾಂಗ್ಲಾದಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು ಹೊರ ಹಾಕುವ ದೃಢ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಿದೆ. ಬಿಜೆಪಿಗೆ ದೇಶ ಮುಖ್ಯ ಎಂದರು.
ನಾವೆಲ್ಲರೂ ಅಜಾತ ಶತೃ ವಾಜಪೇಯಿ ಅವರನ್ನು ಸ್ಮರಿಸಬೇಕು. ಅವರು ಅಂದು ಮೋದಿ ಅವರನ್ನು ಗುರ್ತಿಸಿ ಮೋದಿ ಅವರಲ್ಲಿನ ದೇಶ ಪ್ರೇಮ, ದೇಶ ಭಕ್ತಿಯನ್ನು ಗಮನಿಸಿ ಅವರನ್ನು ಅಂದು ಗುಜರಾತ್ ನ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು.
ನಂತರ ಅವರ ಪರಿಶ್ರಮ, ದೇಶ ಪ್ರೇಮ ದೇಶ ಭಕ್ತಿಯಿಂದ ಪ್ರಧಾನ ಮಂತ್ರಿಯ ಸ್ಥಾನಕ್ಕೇರಿ ಸತತ 12 ವರ್ಷಗಳ ಕಾಲ ಸುದೀರ್ಘ, ಸುರಕ್ಷತೆಯ, ಸುಭದ್ರತೆಯ ಆಡಳಿತ ನೀಡುತ್ತಾ 12 ವರ್ಷ ಪೂರೈಸಿ ಪ್ರಧಾನಿಯಾಗಿ ಮುಂದುವರೆದ ಕೀರ್ತಿ ವಿಶ್ವ ಗುರು ನರೇಂದ್ರ ಮೋದಿ ಅವರದ್ದಾಗಿದೆ. ಇದಕ್ಕೆ ನಾವೆಲ್ಲರೂ ಕಾರಣ ಎಂದು ಹೆಮ್ಮೆ ಪಡಬೇಕು ಎಂದರು.
ನರೇಂದ್ರ ಮೋದಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ದೇಶದ ಸರ್ವತೋಮುಖ ಅಭಿವೃದ್ದಿಗೆ ಕೈಗೊಂಡ ಯೋಜನೆಗಳು, ದೇಶ ಕಟ್ಟುವ ಕೆಲಸದ ಪರಿ ಬಗ್ಗೆ ಜನ ಸಾಮಾನ್ಯರಿಗೆ ಮಾಹಿತಿ ನೀಡಲಾಯಿತು. ಸ್ವಚ್ಚತಾ ಕಾರ್ಯ ಮಾಡಿ ಸಸಿಗಳನ್ನು ನೆಡಲಾಯಿತು.
ಶ್ರೀರಾಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಸ್ವಚ್ಚತಾ ಕಾರ್ಯ ಮಾಡಿ ಸಸಿಗಳನ್ನು ನೆಡಲಾಯಿತು.
ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಕೆ.ಬಿ.ಮುರಳಿ, ಮಧು, ಸೀಕಲ್ ಆನಂದಗೌಡ, ಕಂಬದಹಳ್ಳಿ ಸುರೇಂದ್ರಗೌಡ, ರಮೇಶ್ ಬಾಯಿರಿ, ಆಂಜನೇಯಗೌಡ, ಡಾ.ಸತ್ಯನಾರಾಯಣರಾವ್, ಬಿ.ಸಿ.ನಂದೀಶ್, ಪಿ.ವಿ.ಶ್ರೀನಿವಾಸ್, ದೊಣ್ಣಹಳ್ಳಿ ರಾಮಣ್ಣ, ರಾಮಕೃಷ್ಣ, ನರೇಶ್, ರೂಪಸಿ ರಮೇಶ್, ನರ್ಮದ ಇನ್ನಿತರೆ ಮುಖಂಡರು, ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.