Home News ಬಗೆಹರಿಯದ ಕಸ ಸಂಗ್ರಹಣೆ ಅವ್ಯವಸ್ಥೆ, ತಪ್ಪದ ಕಿರಿ ಕಿರಿ

ಬಗೆಹರಿಯದ ಕಸ ಸಂಗ್ರಹಣೆ ಅವ್ಯವಸ್ಥೆ, ತಪ್ಪದ ಕಿರಿ ಕಿರಿ

0
Sidlaghatta Municipality Waste Management Crisis

Sidlaghatta : ನಗರಸಭೆ ಜನ ಪ್ರತಿನಿಧಿಗಳ ಅವಧಿ ಮುಗಿದು ಕೆಲವೇ ದಿನಗಳು ಕಳೆದಿದ್ದು, ವ್ಯಾಪ್ತಿಯಲ್ಲಿ ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ಸರಿಯಾಗಿ ಕಾರ್ಯರೂಪಕ್ಕೆ ಬರದೇ ದಿನೇ ದಿನೇ ಒಂದಿಲ್ಲೊಂದು ಸಮಸ್ಯೆಗೆ ಕಾರಣವಾಗುತ್ತಿದೆ. ಮಂಗಳವಾರ ಬೆಳಗ್ಗೆ ತ್ಯಾಜ್ಯದ ವಿಲೇವಾರಿ ಕುರಿತಾಗಿ ಅಶೋಕ ರಸ್ತೆಯ ನಿವಾಸಿಗರು ಪೌರಾಯುಕ್ತೆ ಅಮೃತ ಅವರೊಡನೆ ವಾಗ್ವಾದ ನಡೆಸಿ, ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ಈಗಾಗಲೇ ಹಸಿ ಕಸ, ಒಣ ಕಸ ಬೇರ್ಪಡಿಸಿ ಕೊಡಬೇಕೆಂದು ತಿಳಿಸಿದೆಯಾದರೂ ಅದು ಅನುಷ್ಠಾನಕ್ಕೆ ಬಾರದಾಗಿದೆ. ಮನೆಗಳಲ್ಲಿ ಬೇರ್ಪಡಿಸಿ ಕೊಟ್ಟರೂ ನಂತರ ಅದನ್ನು ಒಂದೇ ಸಂಗ್ರಹಣಾ ವಾಹನಕ್ಕೆ ಸುರಿಯಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಅದಲ್ಲದೆ ಕಸ ಸಂಗ್ರಹಣೆಗೆ ಕೆಲ ವಾರ್ಡುಗಳಲ್ಲಿ 11-12 ಗಂಟೆಗೆ ವಾಹನ ಬರುತ್ತಿದ್ದು, ಆ ಸಮಯದಲ್ಲಿ ಕೆಲಸ, ಕಾರ್ಯ, ವ್ಯಾಪಾರಕ್ಕೆಂದು ಹೋಗುವುದೋ ಅಥವಾ ಮನೆಯಲ್ಲಿ ಕಸದ ವಾಹನಕ್ಕಾಗಿ ಕಾಯಬೇಕೋ ಎಂದು ಪೌರಾಯುಕ್ತೆಯನ್ನು ಪ್ರಶ್ನಿಸಿದರು.

ಹಲವು ವಾರ್ಡುಗಳಲ್ಲಿ ವಾರಕ್ಕೆ ಎರಡು ಬಾರಿ ವಾಹನದ ಮೂಲಕ ಕಸದ ಸಂಗ್ರಹಣೆ ನಡೆಯುತ್ತಿದೆ. ಈಗಾಗಲೇ ಯುಜಿಡಿ, ಕುಡಿಯುವ ನೀರಿಗಾಗಿ ರಸ್ತೆ ಅಗೆದು ದುರಸ್ತಿಯಾಗಿ, ಮಳೆಯೂ ಆಗುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ಯುಜಿಡಿ ತುಂಬಿ ರಸ್ತೆಗೆ ಹರಿದು ದುರಸ್ತಿ ಕಾರ್ಯಗಳು ಸಾಮಾನ್ಯವಾಗಿದ್ದು, ಆಗಾಗ್ಗೆ ಸಂಚಾರಕ್ಕೆ ಅಡ್ಡಿಯಾಗಿ ಕಸ ಸಂಗ್ರಹಣೆಗೆ ವಾಹನ ಬಾರದೆ ಮನೆಯಲ್ಲಿಯೇ ಕಸ ಉಳಿಯುವಂತಾಗುತ್ತಿದೆ.

ಮನೆಯಲ್ಲಿ ಸಂಗ್ರಹಣೆಯಾದ ಕಸವನ್ನು ಮುಖ್ಯ ರಸ್ತೆಗಳಲ್ಲಿ ಕಸ ಶೇಖರಿಸುವ ಸ್ಥಳದಲ್ಲಿ ಹಾಕುವುದು ಬಿಟ್ಟು ಜನರಿಗೆ ಬೇರೆ ಆಯ್ಕೆ ಇಲ್ಲದಾಗಿದೆ. ಹಾಗೆ ಕಸ ಹಾಕಲು ಬಂದರೆ, ನಗರಸಭೆ ಸಿಬ್ಬಂದಿ ದೂಷಿಸುತ್ತಾರೆ ಮತ್ತು ಫೈನ್ ಹಾಕುತ್ತೇವೆ ಎಂದು ಹೆದರಿಸುತ್ತಾರೆ. ಮೊದಲು ಈ ಸ್ಥಳದಲ್ಲಿ ಕಸ ಶೇಖರಿಸುವ ಗುಂಡಿಗಳು ಇರುತ್ತಿದ್ದವು, ವಾಹನ ಬರದೇ ಇದ್ದಾಗ, ಅಥವಾ ಕೆಲಸದಿಂದ ಬಂದು ಆ ನಿಗದಿತ ಸ್ಥಳದಲ್ಲಿ ಹಾಕುತ್ತಿದ್ದೆವು, ಮುಂಜಾನೆ ಕಸ ಸಂಗ್ರಹಿಸುವ ವಾಹನಗಳು ತೆಗೆದುಕೊಂಡು ಹೋಗುತ್ತಿದ್ದವು. ಈಗ ಕಸದ ಶೇಖರಣೆಗೆ ಗುಂಡಿಯೂ ಇಲ್ಲ, ನಿಗದಿತ ಸ್ಥಳವೂ ಇಲ್ಲ, ವಾರದಲ್ಲಿ 1-2 ದಿನ, 11-12 ಗಂಟೆಗೆ ವಾಹನ ಬರುವುದರಿಂದ ಕೆಲಸ, ಕಾರ್ಯಗಳಿಗೆ ಹೋದರೆ ವಾರವಿಡೀ ಕಸ ಶೇಖರಣೆಯಾಗುತ್ತಿದೆ ಎಂದು ನಿವಾಸಿಗಳು ತಿಳಿಸಿದರು.

ನಗರಸಭೆ ಪೌರಾಯುಕ್ತೆ ಅಮೃತ ಮಾತನಾಡಿ, ವಾಹನಗಳನ್ನು ಜಿಪಿಎಸ್ ನಲ್ಲಿ ಟ್ರ್ಯಾಕ್ ಮಾಡುತ್ತೇವೆ, ಬರದಿದ್ದರೆ ಆಪ್ ನಲ್ಲಿ ದೂರು ನೀಡಿ ಎಂದು ಹೇಳಿದರು. ಆದರೆ ಪುನಃ ಜನರು ಪ್ರಶ್ನಿಸಿದಾಗ, ಸಿಬ್ಬಂದಿ ಕೊರತೆ ಇದೆ, ಕೆಲವೊಮ್ಮೆ ವಾಹನ ದುರಸ್ತಿಯಾಗಿದೆ ಎಂದು ಉತ್ತರಿಸಿದರು. ಈ ಸಮಸ್ಯೆಗೆ ಪರಿಹಾರವೇನೆಂದು ಕೇಳಿದರೆ ಸರಿಯಾದ ಉತ್ತರ ಇಲ್ಲದಿದ್ದರೂ, ಕಸ ಹಾಕಿದರೆ ಫೈನ್ ಹಾಕುವುದಾಗಿ ಮಾತ್ರ ಹೇಳಿದರು.

ಜನರಿಗಾಗಿ ಇರುವ ವ್ಯವಸ್ಥೆಯಲ್ಲಿ ಜನರ ಕಷ್ಟಗಳಿಗೆ ಸ್ಪಂದಬೇಕಾದ ಕರ್ತವ್ಯ ಅಧಿಕಾರಿಗಳದ್ದು. ಆದರೆ, ಅಧಿಕಾರಿ ತಮ್ಮ ಸೇವೆಗಿಂತ ದರ್ಪವನ್ನು ಪ್ರದರ್ಶಿಸುತ್ತಾರೆ. ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲದಿರುವುದು ಬೇಸರ ತಂದಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version