
Sidlaghatta : ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟವನ್ನು ಪೂರೈಸಲು ISKCON ಸಂಸ್ಥೆಯ ಅಕ್ಷಯ ಪಾತ್ರೆ ಫೌಂಡೇಷನ್ ಗೆ ಅವಕಾಶ ಕೊಟ್ಟಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಬಿಸಿಯೂಟ ತಯಾರಿಸುವ ನೌಕರರು ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರಿ ಶಾಲೆಗಳಿಗೆ ಸರ್ಕಾರೇತರ ಸಂಘ ಸಂಸ್ಥೆ, ಧರ್ಮಾಧಾರಿತ ಸಂಸ್ಥೆಗಳಿಂದ ಬಿಸಿಯೂಟ ಪೂರೈಸುವುದನ್ನು ಸರ್ಕಾರ ಮತ್ತು ಸುಪ್ರೀಂ ಕೋರ್ಟ್ ಕೂಡ ನಿಷೇಧಿಸಿದೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾತ್ರ ಧರ್ಮಾಧಾರಿತ ಸಂಸ್ಥೆ ಇಸ್ಕಾನ್ ಗೆ ಅನುಮತಿ ಕೊಟ್ಟಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಮದ್ಯಾಹ್ನದ ಬಿಸಿಯೂಟ ಯೋಜನೆಯು ಯಾವುದೆ ಅಡ್ಡಿ ಆತಂಕವಿಲ್ಲದೆ ಸುಸೂತ್ರವಾಗಿ ನಡೆಯುತ್ತಿದೆ. 1,13,700 ಮಂದಿ ಮಹಿಳೆಯರು ಬಿಸಿಯೂಟ ತಯಾರಿಕೆಯಲ್ಲಿ ತೊಡಗಿದ್ದಾರೆ.
ಆರಂಭದಲ್ಲಿ ಅತಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದು ಮುಖ್ಯ ಶಿಕ್ಷಕರಿಗೆ ಅಥವಾ ಇಲಾಖೆಯ ಅಧಿಕಾರಿಗಳಿಗೆ ಯಾವುದೆ ರೀತಿಯ ಅಡಚಣೆ ತೊಂದರೆ ಇಲ್ಲದೆ ಮಕ್ಕಳಿಗೆ ಬಿಸಿಯೂಟ ತಯಾರಿಸಿ ಬಡಿಸಲಾಗುತ್ತಿದೆ.
ಆದರೂ ಇದೀಗ ಸುಪ್ರೀಂ ಕೋರ್ಟ್ ಸೂಚನೆಯನ್ನು ಉಲ್ಲಂಘಿಸಿ ಸರ್ಕಾರೇತರ ಸಂಸ್ಥೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟ ಪೂರೈಸಲು ಅವಕಾಶ ಮಾಡಿಕೊಟ್ಟಿರುವುದು ಹತ್ತು ಹಲವು ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದು ದೂರಿದರು.
ಮಕ್ಕಳಲ್ಲಿ ಪೌಷ್ಠಿಕತೆಯನ್ನು ಹೆಚ್ಚಿಸುವ ಬೆಳ್ಳುಳ್ಳಿ, ಈರುಳ್ಳಿಯನ್ನು ಇಸ್ಕಾನ್ ನ ಅಕ್ಷಯ ಪಾತ್ರೆ ತಯಾರಿಸುವ ಬಿಸಿಯೂಟದ ಅಡುಗೆಯಲ್ಲಿ ಬಳಸುವುದಿಲ್ಲ. ಇದು ಮಕ್ಕಳಲ್ಲಿ ಅಗತ್ಯ ಪೌಷ್ಟಿಕತೆ ಕುಗ್ಗಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ ಜತೆಗೆ ಅನೇಕ ವರ್ಷಗಳಿಂದಲೂ ಕೆಲಸ ಮಾಡಿಕೊಂಡು ಬಂದ ಬಿಸಿಯೂಟ ತಯಾರಿಸುವ ನೌಕರರ ಕೆಲಸಕ್ಕೂ ಕುತ್ತು ತರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಅವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮಿದೇವಮ್ಮ, ಮುಖಂಡರಾದ ಮುನಿಕೃಷ್ಣಪ್ಪ, ಮುನಿಯಪ್ಪ, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಮಂಜುಳಮ್ಮ, ಗಾಯಿತ್ರಿ, ನಾಗಮಣಿ, ಸುಶೀಲ, ಚಂದ್ರಕಲ, ದ್ಯಾವಮ್ಮ, ಮಂಜುಳಬಾಯಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.