
Sidlaghatta : ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಅಕ್ಷಯ ಪಾತ್ರೆ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ಮಧ್ಯಾಹ್ನ ಬಿಸಿಯೂಟ ನೀಡಲು ಅನುಮತಿ ಕೋರಿರುವ ವಿಚಾರದ ಕುರಿತು ಸಭೆ ನಡೆಸಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ಮಾತನಾಡಿ, ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಪ್ರತಿಷ್ಠಾನ ಸಂಸ್ಥೆಯವರು ತಾಲ್ಲೂಕಿನ 2,500 ಮಕ್ಕಳಿಗೆ ಬಿಸಿಯೂಟ ನೀಡಲು ಮುಂದೆ ಬಂದಿದ್ದಾರೆ. ಈಗಿರುವ ಅಡುಗೆ ಸಿಬ್ಬಂದಿಯನ್ನು ಹಾಗೆಯೇ ಉಳಿಸಿಕೊಂಡು ಸರ್ಕಾರಿ ಮತ್ತು ಎನ್.ಜಿ.ಒ ನಿಯಮಗಳಿಗೆ ಸರಿಹೊಂದುವಂತೆ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ನಮ್ಮ ಉದ್ದೇಶ ಶಿಕ್ಷಕರಿಗೆ ಹೊರೆ ಕಡಿಮೆಯಾಗಿ ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ಬಿಸಿಯೂಟ ನೀಡುವುದಾಗಿದೆ. ಇರುವ ಅಡುಗೆ ಸಿಬ್ಬಂದಿ ಶಾಲಾ ಹಂತದಲ್ಲಿ ಮಕ್ಕಳಿಗೆ ಮೊಟ್ಟೆ ಮತ್ತು ಹಾಲು ಬೇಯಿಸಿಕೊಟ್ಟು, ಅಕ್ಷಯ ಪಾತ್ರೆ ಪ್ರತಿಷ್ಠಾನ ತಂದುಕೊಡುವ ಬಿಸಿಯೂಟವನ್ನು ಮಕ್ಕಳಿಗೆ ಉಣಬಡಿಸಬೇಕು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೂ ಈ ಯೋಜನೆ ತಲುಪಲಿ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ತಾಲ್ಲೂಕು ಪಂಚಾಯಿತಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮೊದಲ ಹಂತದಲ್ಲಿ 30 ಶಾಲೆಗಳಿಂದ 2500 ವಿದ್ಯಾರ್ಥಿಗಳ ಪಟ್ಟಿಯನ್ನು ನೀಡುವುದಾಗಿ ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ.ಆರ್, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್, ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಬಿ.ರೇಣುಕಾ, ಅಕ್ಷಯ ಪಾತ್ರೆ ಫೌಂಡೇಶನ್ ನ ಪ್ರತಿನಿಧಿಗಳಾದ ಮಾಧವ್ ಗುರೂಜಿ, ಸುಬ್ರಮಣಿ , ಸರಸ್ವತಿ, ಶಾರದಾ ಮತ್ತು ರಾಘವೇಂದ್ರ ಶಾಲೆಯ ಮುಖ್ಯ ಶಿಕ್ಷಕರು ಹಾಜರಿದ್ದರು.