
Sidlaghatta : ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿಯ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ತಾಲ್ಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಲಗಾರರಿಗೆ ಮತ್ತು ಮೇಲ್ವಿಚಾರಕರರಿಗೆ ನೀರಿನ ಟ್ಯಾಂಕ್ ಗಳ ಸ್ವಚ್ಛತೆ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇರುವ ಟ್ಯಾಂಕ್ ಮತ್ತು ಸಿಸ್ಟರ್ನ್ ಗಳನ್ನು ಸ್ವಚ್ಚಗೊಳಿಸುವ ಬಗ್ಗೆ ತರಬೇತಿ ನೀಡಲಾಯಿತು.
ಈ ತರಬೇತಿ ಕಾರ್ಯಾಗಾರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸಿ.ಇ.ಒ ಡಾ.ವೈ.ನವೀನ್ ಭಟ್ ಅವರು ಮಾತನಾಡಿ, ಬೇಸಿಗೆ ಕಾಲದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ನೀರಿನ ಅಭಾವ ಆಗದಂತೆ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳಬೇಕು. ಸಾರ್ವಜನಿಕರಿಗೆ ನೀರಿನ ಬಳಕೆ ಹಾಗೂ ನೀರಿನ ಅಭಾವದ ಬಗ್ಗೆ ಸೌಜನ್ಯಯುತವಾಗಿ ಜಲಗಾರರು ಮಾಹಿತಿ ನೀಡಬೇಕು. ಟ್ಯಾಂಕ್, ತೊಟ್ಟಿಗಳು ಶುಚಿಯಾಗಿಡುವ ಜೊತೆಗೆ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಲಗಾರರು ನೀರಿನ ಸಮಸ್ಯೆ ಇದ್ದರೆ ತಕ್ಷಣ ಪಿಡಿಒಗಳ ಗಮನಕ್ಕೆ ತರಬೇಕು ಎಂದರು.
ಜಲಗಾರರಿಗೆ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವ ವೈಜ್ಞಾನಿಕ ವಿಧಾನಗಳನ್ನು ಕಲಿಸುವ ಈ ಶಿಬಿರದಲ್ಲಿ ಕಲಿತು ಅವನ್ನು ಗ್ರಾಮಗಳಲ್ಲಿ ಅಳವಡಿಸಿಕೊಳ್ಳಬೇಕು. ನೀರಿನ ಗುಣಮಟ್ಟ ಪರೀಕ್ಷೆ ಮತ್ತು ನಿರ್ವಹಣೆಯನ್ನು ಈ ತರಬೇತಿ ಶಿಬಿರ ಒಳಗೊಂಡಿದೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕಲುಷಿತ ನೀರು ಸಂಬಂಧಿತ ರೋಗಗಳು ಕಡಿಮೆಯಾಗುತ್ತವೆ ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ.ಆರ್., ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ಜೆಜೆಎಂ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.