
Melur, Sidlaghatta : ಬಹುನಿರೀಕ್ಷಿತ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ (CHIMUL) ನಿರ್ದೇಶಕರ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 1ರಂದು ಮತದಾನ ನಡೆಯಲಿದ್ದು, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎರಡು ಸ್ಥಾನಗಳಿಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟವು ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದೆ.
ಶಾಸಕ ಬಿ.ಎನ್. ರವಿಕುಮಾರ್ ಅವರ ಮೇಲೂರು ಗೃಹಕಚೇರಿಯಲ್ಲಿ ಗುರುವಾರ ನಡೆದ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಡೇರಿಗಳ ಡೆಲಿಗೇಟ್ಸ್‌ಗಳ ಮಹತ್ವದ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಯಿತು.
ಅಂತಿಮಗೊಂಡ ಅಭ್ಯರ್ಥಿಗಳು:
- ಶಿಡ್ಲಘಟ್ಟ ಕ್ಷೇತ್ರ: ಬಂಕ್ ಮುನಿಯಪ್ಪ.
- ಜಂಗಮಕೋಟೆ ಕ್ಷೇತ್ರ: ಹುಜಗೂರು ರಾಮಯ್ಯ.
ಮೈತ್ರಿ ಬಲದ ಪ್ರದರ್ಶನ: ಸಭೆಯ ನಂತರ ಮಾತನಾಡಿದ ಶಾಸಕ ಬಿ.ಎನ್. ರವಿಕುಮಾರ್, “ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ. ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಬಾಗೇಪಲ್ಲಿ ಕ್ಷೇತ್ರಕ್ಕೆ ಈ ತಿಮ್ಮಸಂದ್ರದ ಶಿವಾರೆಡ್ಡಿ ಅವರ ತಮ್ಮನನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗುವುದು. ಚೇಳೂರು ಕ್ಷೇತ್ರಕ್ಕೂ ಶೀಘ್ರವೇ ಒಬ್ಬರನ್ನು ಅಂತಿಮಗೊಳಿಸಿ ಬುಧವಾರ (ಜನವರಿ 21) ಎಲ್ಲ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ,” ಎಂದು ವಿವರಿಸಿದರು.
ಮತ್ತೊಂದೆಡೆ, ಕಾಂಗ್ರೆಸ್ ಪಾಳಯದಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲದಿರುವುದು ಕುತೂಹಲ ಮೂಡಿಸಿದೆ. ನಾಮಪತ್ರ ಸಲ್ಲಿಕೆಗೆ ದಿನಾಂಕ ಹತ್ತಿರವಾಗುತ್ತಿದ್ದರೂ ಕೈ ನಾಯಕರು ಇನ್ನೂ ಕಸರತ್ತು ನಡೆಸುತ್ತಿದ್ದಾರೆ.