Home News ಶ್ರೀ ಪಾರ್ವತಾಂಭ ಸಮೇತ ಶ್ರೀ ಸೋಮೇಶ್ವರಸ್ವಾಮಿಯ ಬ್ರಹ್ಮರಥೋತ್ಸವ

ಶ್ರೀ ಪಾರ್ವತಾಂಭ ಸಮೇತ ಶ್ರೀ ಸೋಮೇಶ್ವರಸ್ವಾಮಿಯ ಬ್ರಹ್ಮರಥೋತ್ಸವ

0
Sidlaghatta Gudihalli Sri Someshwaraswamy Brahmarathotsava

Gudihalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗುಡಿಹಳ್ಳಿಯ ಶ್ರೀ ಪಾರ್ವತಾಂಭ ಸಮೇತ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವವನ್ನು ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಬ್ರಹ್ಮರಥೋತ್ಸವಕ್ಕೆ ಸಾಕ್ಷಿಯಾದರು.

ತಾಲ್ಲೂಕಿನ ಅಬ್ಲೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡಿಹಳ್ಳಿ ಗ್ರಾಮದ ಶ್ರೀ ಪಾರ್ವತಾಂಭ ಸಮೇತ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದ 18 ನೇ ವರ್ಷದ ಬ್ರಹ್ಮ ರಥೋತ್ಸವದ ಅಂಗವಾಗಿ ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಸಿಂಗರಿಸಿ ವಿಶೇಷ ಪೂಜೆ, ಹೋಮ, ಹವನ, ಕಳಶ ಪೂಜೆ, ಗಣಪತಿ ಪೂಜೆ ನಡೆಸಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.

ನಗರ ಹಾಗೂ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಗುಡಿಹಳ್ಳಿ ಮತ್ತು ಸುತ್ತಲಿನ ಗ್ರಾಮಗಳ ಹೆಣ್ಣುಮಕ್ಕಳು ದೀಪಗಳನ್ನು ಹೊತ್ತು ಮೆರವಣಿಗೆ ನಡೆಸಿ ದೇವರಿಗೆ ಆರತಿ ಎತ್ತಿದರು. ವೀರಗಾಸೆ ಕಲಾತಂಡ ಮೆರವಣಿಗೆಗೆ ಮೆರುಗನ್ನು ತಂದಿತ್ತು.

ರಥೋತ್ಸವಕ್ಕೆ ಚಾಲನೆ ನೀಡಿದ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ರೈತರ ಬದುಕು ಹಸನಾಗಲು ವರುಣ ದೇವ ಕೃಪೆ ತೋರಬೇಕು, ಕೆರೆ-ಕಟ್ಟೆಗಳು ತುಂಬಿ ಉತ್ತಮ ಫಸಲು ಬರುವಂತಾಗಲಿ. ಕ್ಷೇತ್ರದ ಜನರು ನೆಮ್ಮದಿಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾಗಿ ಹೇಳಿದರು.

ಕಾಂಗ್ರೆಸ್ ಮುಖಂಡರಾದ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಶ್ರೀ ಪಾರ್ವತಾಂಭ ಶ್ರೀ ಸೋಮೇಶ್ವರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಹರಿಕೃಷ್ಣ, ಚನ್ನಕೃಷ್ಣಪ್ಪ, ಕೆಂಪಣ್ಣ, ಚನ್ನಪ್ಪ, ಜಿ.ಎನ್.ನಾರಾಯಣಸ್ವಾಮಿ, ಜಿ.ವಿ.ಮುನಿವೆಂಕಟಸ್ವಾಮಿ, ಅರ್ಚಕರಾದ ಎಸ್.ನಂಜುಂಡಯ್ಯ, ಆಗಮೀಕ ಆರ್.ಗಣೇಶ್ ದೀಕ್ಷಿತ್ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version