
Malamachanahalli, Sidlaghatta : ಕಾಲುಬಾಯಿ ಜ್ವರ ಲಸಿಕಾ ಅಭಿಯಾನವು ನಮ್ಮ ಕೃಷಿ‑ಹೈನುಗಾರಿಕೆಯನ್ನು, ನಮ್ಮ ಕುಟುಂಬದ ಜೀವನಾಧಾರವನ್ನು ರಕ್ಷಿಸುವ ಒಂದು ದೊಡ್ಡ ಹೆಜ್ಜೆಯಾಗಿದೆ. ಕಾಲುಬಾಯಿ ಜ್ವರವು ಹಾಲಿನ ಉತ್ಪಾದನೆ, ಹೈನುಗಾರಿಕೆಯ ಆದಾಯ ಮತ್ತು ರೈತರ ಜೀವನದ ಮೇಲೆ ಗಂಭೀರ ಪ್ರಭಾವ ಬೀರುತ್ತದೆ. ಜಾನುವಾರುಗಳಿಗೆ ನಿಯಮಿತವಾಗಿ ಲಸಿಕೆ ಹಾಕಿಸುವುದರಿಂದ ರೋಗ ಬರದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಶನಿವಾರ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ , ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಇವರ ಸಹಯೋಗದೊಂದಿಗೆ ಕೇಂದ್ರ ಪುರಸ್ಕೃತ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 9ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೈನು ಸುರಕ್ಷಿತವಾಗಿದ್ದರೆ ಹೊಲವೂ ಸುರಕ್ಷಿತ, ಕುಟುಂಬವೂ ಸುರಕ್ಷಿತ ಎಂಬ ನಂಬಿಕೆಯಿಂದ ಈ ಲಸಿಕಾ ಅಭಿಯಾನಕ್ಕೆ ನೀವೆಲ್ಲರೂ ಸಕ್ರಿಯವಾಗಿ ಸೇರಿಕೊಳ್ಳಬೇಕು. ನಿಮ್ಮ ಜಾನುವಾರಿಗೆ ಲಸಿಕೆ ಹಾಕಿಸುವುದನ್ನು ಒಂದು ಕಡ್ಡಾಯ ಕರ್ತವ್ಯವಾಗಿ ನೋಡಿ, ನಿಮ್ಮ ಸುತ್ತಮುತ್ತಲಲ್ಲಿರುವ ಪ್ರತಿಯೊಬ್ಬ ರೈತನಿಗೂ ಇದೇ ಸಂದೇಶ ಹರಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಜಿಟಲ್ ಏಐ ಗನ್ ವಿತ್ ಕ್ಯಾಮೆರಾ, ರಾಸುಗಳ ವಿಮಾ ಚೆಕ್ ವಿತರಣೆ , ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಗಣಕ ಯಂತ್ರಗಳ ವಿತರಣೆ ಮಾಡಲಾಯಿತು.
ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಯ್ಯ, ಚಿಮುಲ್ ಶಿಡ್ಲಘಟ್ಟ ಶಿಬಿರದ ಉಪ ವ್ಯವಸ್ಥಪಕ ಡಾ. ಬಿ. ಆರ್.ರವಿಕಿರಣ್, ಸಹಾಯಕ ನಿರ್ದೇಶಕ ಡಾ. ವಿ. ಶ್ರೀನಾಥ್ ರೆಡ್ಡಿ, ಸಂಘದ ಅಧ್ಯಕ್ಷ ದ್ಯಾವಪ್ಪ, ಸಿ.ಇ.ಒ ಎಂ. ವಿನಯ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಗೋಪಾಲ್, ಎಂ. ಜಿ. ನವೀನ್ ಕುಮಾರ್, ಮಳಮಾಚನಹಳ್ಳಿ ಗ್ರಾಮಸ್ಥರು ಹಾಜರಿದ್ದರು.