Melur, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗನಹಳ್ಳಿಯಲ್ಲಿ ಜಾನುವಾರುಗಳಲ್ಲಿ ಹರಡುವ ಕಾಲುಬಾಯಿ ರೋಗ ನಿಯಂತ್ರಣಕ್ಕಾಗಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಿ.ವಿ. ಸುರೇಶ್ ಅವರು ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಅವರು ರೈತರಿಗೆ ಮನವಿ ಮಾಡುತ್ತಾ, “ಕಾಲುಬಾಯಿ ರೋಗದಿಂದ ಜಾನುವಾರುಗಳ ಆರೋಗ್ಯದ ಜೊತೆಗೆ ರೈತರ ಆರ್ಥಿಕಸ್ಥಿತಿಗೂ ಭಾರೀ ಹೊಡೆತ ಬೀಳುತ್ತದೆ. ಇದನ್ನು ತಡೆಯಲು ಲಸಿಕೆ ಹಾಕಿಸುವುದು ಏಕೈಕ ಪರಿಣಾಮಕಾರಿ ಮಾರ್ಗ. ನಾಲ್ಕು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಲಸಿಕೆ ಕಡ್ಡಾಯ,” ಎಂದು ತಿಳಿಸಿದರು.
ನವೆಂಬರ್ 3 ರಿಂದ ಡಿಸೆಂಬರ್ 2 ರವರೆಗೆ ನಡೆಯುವ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಹೇಳಿದರು. ಇದು ರಾಜ್ಯದಲ್ಲಿ ನಡೆಯುತ್ತಿರುವ 8ನೇ ಸುತ್ತಿನ ಲಸಿಕಾ ಅಭಿಯಾನವಾಗಿದ್ದು, ರೋಗ ಹರಡುವಿಕೆ ತಡೆಯಲು ನಿಯಮಿತ ಲಸಿಕೆ ಅತ್ಯಾವಶ್ಯಕವೆಂದರು.
“ಲಸಿಕೆ ಹಾನಿಯಲ್ಲ, ರಕ್ಷಣೆ”
ಪಶುಪಾಲನಾ ಇಲಾಖೆಯ ಪಶುಸಖಿ ಇಂದ್ರ ಮಾತನಾಡಿ, “ಲಸಿಕೆ ಹಾಕಿಸಿದರೆ ಹಾಲು ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ತಪ್ಪಾಗಿದೆ. ಲಸಿಕೆ ಜಾನುವಾರುಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರೈತರು ಯಾವುದೇ ಭಯವಿಲ್ಲದೆ ಲಸಿಕೆ ಹಾಕಿಸಬೇಕು,” ಎಂದು ತಿಳಿಸಿದರು.
ಕಾಲುಬಾಯಿ ರೋಗದ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ ಕುರಿತು ಜಾಗೃತಿ
ಡೇರಿ ಮುಖ್ಯ ಕಾರ್ಯನಿರ್ವಾಹಕ ಬೈರೇಗೌಡ ಅವರು ಕಾಲುಬಾಯಿ ರೋಗದ ಲಕ್ಷಣಗಳನ್ನು ವಿವರಿಸಿದರು — ಜ್ವರ, ಬಾಯಿಯಲ್ಲಿ ಹುಣ್ಣು, ಜೊಲ್ಲು ಸುರಿಯುವುದು, ಕಾಲು ಕುಂಟುವುದು, ಕೆಚ್ಚಲಿನ ಮೇಲೆ ಗುಳ್ಳೆ ಕಾಣಿಸಿಕೊಳ್ಳುವುದು.
ರೋಗ ನಿಯಂತ್ರಣಕ್ಕೆ ಸೂಚಿಸಿದ ಕ್ರಮಗಳಲ್ಲಿ:
- ಅಡುಗೆ ಸೋಡಾದ ದ್ರಾವಣದಿಂದ ಹುಣ್ಣಿನ ಭಾಗ ಶುದ್ಧಗೊಳಿಸುವುದು
- ಮೃದುವಾದ ಆಹಾರಗಳಾದ ಗಂಜಿ, ಬಾಳೆಹಣ್ಣು, ರಾಗಿ ಅಂಬಲಿ ನೀಡುವುದು
- ಕೊಟ್ಟಿಗೆ ಸ್ವಚ್ಛತೆ, ಕ್ರಿಮಿನಾಶಕಗಳು ಬಳಸುವುದು
- ರೋಗ ಪೀಡಿತ ಜಾನುವಾರುಗಳನ್ನು ಬೇರ್ಪಡಿಸಿ ನೋಡಿಕೊಳ್ಳುವುದು ಸೇರಿವೆ
“ಕಾಲುಬಾಯಿ ರೋಗ ತಡೆಗಟ್ಟಲು ಸರಿಯಾದ ಕ್ರಮ ಎಂದರೆ – ಸತತವಾಗಿ ಎರಡು ಬಾರಿ ಲಸಿಕೆ ಹಾಕಿಸುವುದು ಮತ್ತು ನಂತರ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಪುನರಾವರ್ತನೆ ಮಾಡುವುದು,” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಡೇರಿ ಉಪಾಧ್ಯಕ್ಷ ಜಿ.ಎಂ. ಮುತ್ತೇಗೌಡ, ನಿರ್ದೇಶಕರು ಕರಗಪ್ಪ, ಅಶ್ವಥಪ್ಪ, ಜಿ.ಕೆ. ಶಿವಾನಂದ, ಪಿಳ್ಳೇಗೌಡ ಸೇರಿದಂತೆ ಅನೇಕರು ಹಾಜರಿದ್ದರು.
For Daily Updates WhatsApp ‘HI’ to 7406303366
