Home News ಗ್ರಾಮ ಪಂಚಾಯಿತಿ ಇಲಾಖಾವಾರು ಮಾಹಿತಿ ಪೋರ್ಟಲ್ ನಲ್ಲಿ ಸೇರ್ಪಡೆ

ಗ್ರಾಮ ಪಂಚಾಯಿತಿ ಇಲಾಖಾವಾರು ಮಾಹಿತಿ ಪೋರ್ಟಲ್ ನಲ್ಲಿ ಸೇರ್ಪಡೆ

0
Sidlaghatta Melur Gram Panchayat Meeting

Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ, ಅಧ್ಯಕ್ಷೆ ಶಶಿಕಲಾರಮೇಶ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಗ್ರಾಮಸಭೆಯನ್ನು ಆಯೋಜನೆ ಮಾಡಲಾಗಿತ್ತು.

ಗ್ರಾಮ ಪಂಚಾಯಿತಿಯಿಂದ, ಆರೋಗ್ಯ, ಪೊಲೀಸ್, ಆಹಾರ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳಿಂದ ಮಾಹಿತಿಯನ್ನು ಪಡೆದುಕೊಂಡು ಪೋರ್ಟಲ್ ಗೆ ನಮೂದಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ವಿವಿಧ ಇಲಾಖೆಗಳಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತ ಮಾಹಿತಿಯ ಬಗ್ಗೆ ಚರ್ಚೆ ನಡೆಸಿದರು. ಹಳ್ಳಿವಾರು ಎಷ್ಟು ಪಡಿತರ ಚೀಟಿಗಳಿವೆ, ಎಷ್ಟು ಬಿಪಿಎಲ್, ಎಪಿಎಲ್, ಅಂತ್ಯೋದಯ, ಎಷ್ಟು ಫಲಾನುಭವಿಗಳು ಆಹಾರ ಧಾನ್ಯಗಳು ಪಡೆಯುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಸಭೆಗೆ ತಿಳಿಸಿದರು.

ಪೊಲೀಸ್ ಇಲಾಖೆಯಲ್ಲಿ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದಂತೆ ಎಷ್ಟು ಪ್ರಕರಣಗಳು ದಾಖಲಾಗಿವೆ, ಎನ್ನುವ ಮಾಹಿತಿಯ ಕುರಿತು ಚರ್ಚೆ ನಡೆಸಿದರು. ಕಂದಾಯ ಇಲಾಖೆಯಿಂದ ಎಷ್ಟು ಮಂದಿ ಪಿಂಚಣಿ ಪಡೆಯುತ್ತಿದ್ದಾರೆ, ಎಷ್ಟು ಮಂದಿ ಅನರ್ಹರಿದ್ದಾರೆ. ಪಿಂಚಣಿಗಾಗಿ ಎಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಮುಂತಾದ ಮಾಹಿತಿಗಳು ಪಡೆದುಕೊಂಡರು. ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ, ಮನೆಗೆ ಕೊಳಾಯಿ ಸಂಪರ್ಕ ಕಲ್ಪಿಸಿದ್ದು, ಒಂದು ಕೊಳಾಯಿಗೆ ಎಷ್ಟು ನೀರಿನ ಶುಲ್ಕವನ್ನು ವಿಧಿಸಬೇಕು ಎನ್ನುವ ಬಗ್ಗೆ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಮಾಡುವುದಾಗಿ ತಿಳಿಸಿದರು. ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ತಾಯಿ, ಮಗುವಿನ ಮರಣ ಸಂಭವಿಸಿಲ್ಲ. ಗಂಡಾಂತರ ಮಹಿಳೆಯರಿಲ್ಲ 36 ಹೆರಿಗೆಗಳಾಗಿದ್ದು, ಎಲ್ಲಾ ಹೆರಿಗೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಆಗಿವೆ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಬಾಲ್ಯ ವಿವಾಹಗಳಾಗಿಲ್ಲ. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಬಾಣಂತಿಯರು, ಗರ್ಭೀಣಿಯರಿಗೆ ಆಹಾರವನ್ನು ಒದಗಿಸಲಾಗುತ್ತಿದೆ. ಮಕ್ಕಳ ಕುರಿತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈಗಾಗಲೇ ಮಳೆಯಾಗುತ್ತಿದ್ದು, ಬಿತ್ತನೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಕೃಷಿ ಇಲಾಖೆಯಿಂದ ಅಗತ್ಯವಾಗಿರುವ ಬಿತ್ತನೆ ಬೀಜಗಳನ್ನು ರೈತರಿಗೆ ಒದಗಿಸುವಂತೆ ಸೂಚನೆ ನೀಡಲಾಯಿತು.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಗಳನ್ನು ಹೆಚ್ಚಿಸಿಕೊಳ್ಳಲು ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಶ್ರಮಿಸಬೇಕು. ಬಿಸಿಯೂಟ ಗುಣಮಟ್ಟದಲ್ಲಿರಬೇಕು, ಮಕ್ಕಳಿಂದ ಶೌಚಾಲಯಗಳನ್ನು ಸ್ವಚ್ಚಗೊಳಿಸುವಂತಹ ಪ್ರಯತ್ನಕ್ಕೆ ಕೈ ಹಾಕಬಾರದು. ಇಲಾಖೆಯಿಂದ ಸಿಗುವಂತಹ ಎಲ್ಲಾ ಸೌಲತ್ತುಗಳನ್ನು ಮಕ್ಕಳಿಗೆ ತಲುಪಿಸುವಂತಹ ಕೆಲಸ ಮಾಡಬೇಕು ಎಂದು ಶಿಕ್ಷಕರಿಗೆ ಸೂಚನೆ ನೀಡಲಾಯಿತು. ಆಶಾ ಕಾರ್ಯಕರ್ತೆಯರು, ಮಳೆಗಾಲದಲ್ಲಿ ಬರಬಹುದಾದ ರೋಗಗಳ ಕುರಿತು, ಸಾರ್ವಜನಿಕರಿಗೆ ಅಗತ್ಯವಾಗಿರುವ ಅರಿವು ಮೂಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ವಿ.ಶಾರದಾ ಅವರು ಸೂಚಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾರಮೇಶ್, ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸರೆಡ್ಡಿ, ಎಂ.ಜೆ.ಶ್ರೀನಿವಾಸ್, ದೇವರಾಜ್, ನಾರಾಐಣಸ್ವಾಮಿ, ಕಮಲಮ್ಮ, ಶೋಭಾ, ಗ್ರಾಮ ಆಡಳಿತ ಅಧಿಕಾರಿ ಸುಜ್ಞಾನಮೂರ್ತಿ, ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version