Melur, Sidlaghatta : “ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಜ್ಞಾನವನ್ನು ವೃದ್ಧಿಸುವ ಎಫ್.ಎಲ್.ಎನ್ (FLN) ಆಧಾರಿತ ಕಲಿಕೆಯು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಭದ್ರ ಬುನಾದಿ ಹಾಕಲಿದೆ,” ಎಂದು ಮೇಲೂರು ಗ್ರಾಮ ಪಂಚಾಯಿತಿ ಪಿಡಿಒ ಕೆ.ವಿ.ಶಾರದಾ ತಿಳಿಸಿದರು.
ತಾಲ್ಲೂಕಿನ ಮೇಲೂರು ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಕಲಿಕಾ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ಲಸ್ಟರ್ ವ್ಯಾಪ್ತಿಯ 11 ಶಾಲೆಗಳ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳೊಂದಿಗೆ ಭಾಗವಹಿಸಿ, ಹಬ್ಬದ ವಾತಾವರಣ ನಿರ್ಮಿಸಿದ್ದರು.
ಪಿಡಿಒ ಶಾರದಾ ಅವರು ಮಾತನಾಡಿ, “ಸ್ಪಷ್ಟ ಓದು, ಶುದ್ಧ ಬರಹ ಮತ್ತು ಸರಳ ಲೆಕ್ಕಾಚಾರವು ಮಗುವಿನ ಕನಿಷ್ಠ ಕಲಿಕೆಯ ಮಾನದಂಡಗಳಾಗಿವೆ. ಯಾವ ಮಕ್ಕಳು ಈ ಸಾಮರ್ಥ್ಯಗಳಲ್ಲಿ ಹಿಂದುಳಿದಿದ್ದಾರೋ ಅವರನ್ನು ಗುರುತಿಸಿ ಚಟುವಟಿಕೆ ಆಧಾರಿತ ವಿಶೇಷ ಬೋಧನೆ ಮಾಡುವುದು ಎಫ್.ಎಲ್.ಎನ್ ನ ಉದ್ದೇಶವಾಗಿದೆ,” ಎಂದರು.

ಬಿ.ಆರ್.ಪಿ ಚಂದ್ರಕಲಾ ಅವರು ಮಾತನಾಡಿ, “ಕಲಿಕೆ ಎಂಬುದು ಮಗುವಿಗೆ ಹೊರೆಯಾಗಬಾರದು. ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಆನಂದಮಯ ಚಟುವಟಿಕೆಗಳ ಮೂಲಕ ಬೆಳೆಸುವುದೇ ಈ ಕಲಿಕಾ ಹಬ್ಬದ ಗುರಿ,” ಎಂದು ವಿವರಿಸಿದರು. ಸಿ.ಆರ್.ಪಿ ಶೀಲಾ ಅವರು ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಇಂತಹ ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಪ್ರತಿಭಾ ಪ್ರದರ್ಶನ ಮತ್ತು ಬಹುಮಾನ: ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕವಿತಾ ವಾಚನ, ಮಿಮಿಕ್ರಿ ಹಾಗೂ ನೃತ್ಯದ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮುತ್ತೂರು ಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದರೆ, ಮೇಲೂರು ಶಾಲೆ ದ್ವಿತೀಯ ಹಾಗೂ ಅಪ್ಪೇಗೌಡನಹಳ್ಳಿ ಶಾಲೆ ತೃತೀಯ ಬಹುಮಾನ ಗಳಿಸಿತು. ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ್ ಮತ್ತು ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.