
ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಪುಷ್ಯ ಶುಕ್ಲ ಪಕ್ಷ ಪೌರ್ಣಮಿ ಶನಿವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳೂ ಸೇರಿದಂತೆ ದೂರದೂರುಗಳಿಂದ ಸಾವಿರಾರು ಮಂದಿ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.
ಚಿತ್ರಾವತಿ ನದಿ ತಟದಲ್ಲಿ ನೆಲೆಸಿರುವ ರಾಮಲಿಂಗನಬೋಡು(ಬೆಟ್ಟ) ಮೇಲೆ ನೆಲೆನಿಂತ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವಕ್ಕೆ ನಾನಾ ಕಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾಗಿ ದೇವರ ದರ್ಶನ ಪಡೆದರು.
ಬ್ರಹ್ಮ ರಥೋತ್ಸವ ಅಂಗವಾಗಿ ಸ್ವಾಮಿಗೆ ಹೂವಿನ ಅಲಂಕಾರ ಮಾಡಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ರಥೋತ್ಸವದಲ್ಲಿ ಭಾಗವಹಿಸಿದ್ದ ಎಲ್ಲ ಭಕ್ತರಿಗೂ ಸಾಮೂಹಿಕ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.
ಅಲಂಕೃತ ಉತ್ಸವ ಮೂರ್ತಿಗಳನ್ನು ತೇರಿಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಬ್ರಹ್ಮ ರಥೋತ್ಸವಕ್ಕೆ ತಹಶೀಲ್ದಾರ್ ಎನ್.ಗಗನ ಸಿಂಧು, ಶಾಸಕ ಬಿ.ಎನ್.ರವಿಕುಮಾರ್ ಅವರು ತೇರಿನ ಹಗ್ಗ ಹಿಡಿದೆಳೆಯುವ ಮೂಲಕ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಿ.ಎನ್.ರವಿಕುಮಾರ್, “ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿದು ಎನ್ನುವ ನಂಬಿಕೆ ಭಕ್ತರಲ್ಲಿದೆ. ಭಕ್ತಿ ಇರುವ ಕಡೆ ಭಗವಂತ ಇರುತ್ತಾನೆ. ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಎಲ್ಲರೂ ಸುಖ ಸಂತೋಷ ನೆಮ್ಮದಿಯ ಬದುಕನ್ನು ನಡೆಸುವಂತಾಗಲಿ” ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ದೇವಾಲಯದ ಕನ್ವೀನಿಯರ್ ಸುನಿತಾ ಶ್ರೀನಿವಾಸರೆಡ್ಡಿ, ಸದಸ್ಯ ಅಮ್ಮಗಾರಹಳ್ಳಿ ಬೈರಾರೆಡ್ಡಿ, ಕೆಪಿಸಿಸಿ ಕೋ-ಆರ್ಡಿನೇಟರ್ ರಾಜೀವ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಪುಟ್ಟು ಆಂಜಿನಪ್ಪ ಪ್ರಮುಖರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಬ್ರಹ್ಮರಥೋತ್ಸವದ ಜಾತ್ರೆಯ ಪರಿಷೆ ಅಂಗವಾಗಿ ಬರಗು ಬತಾಸು ಮೈಸೂರು ಪಾಕು ಜಿಲೇಬಿಯಂತ ಸಿಹಿ ತಿಂಡಿ ತನಿಸುಗಳ ಅಂಗಡಿ, ಬಿಸಿ ಬಿಸಿ ಬೋಂಡ, ಐಸ್ ಕ್ರೀಂನಂತ ಬಾಯಿ ಚಪ್ಪರಿಸುವ ತಿಂಡಿ ತಿನಿಸುಗಳ ಅಂಗಡಿ, ಮಕ್ಕಳ ಆಟಿಕೆಗಳ, ಹೆಂಗೆಳೆಯರ ಅಲಂಕಾರಿಕ ವಸ್ತುಗಳು, ಗೃಹ ಉಪಯೋಗಿ ವಸ್ತುಗಳ ಅಂಗಡಿ, ಕಲ್ಲಂಗಡಿ ಪಪ್ಪಾಯ ಇನ್ನಿತರೆ ಹತ್ತಾರು ಅಂಗಡಿಗಳು ತಲೆ ಎತ್ತಿದ್ದವು, ಖರೀದಿಯ ಭರಾಟೆಯೂ ಜೋರಾಗಿತ್ತು. ಪರಿಷೆಯ ವಿಶೇಷವಾಗಿ ಬರಗು ಬತಾಸು ಖರೀದಿಸಿ ಮನೆಗೆ ಹೊತ್ತೊಯ್ದರು. ಸಾಂಪ್ರದಾಯಿಕ ದನಗಳ ಜಾತ್ರೆ (ಪರಿಷೆ) ವಿಶೇಷವಾಗಿತ್ತು.