Home News ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ

ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ

0
Ramalingeshwara Swamy Rathotsava

Bashettahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯಿರುವ ರಾಮಲಿಂಗೇಶ್ವರ ಬೆಟ್ಟದ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವನ್ನು ಪುಷ್ಯ ಶುಕ್ಲ ಪಕ್ಷ ಪೌರ್ಣಮಿ ಶುಕ್ರವಾರದಂದು ವಿಜೃಂಭಣೆಯಿಂದ ಆಚರಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳೂ ಸೇರಿದಂತೆ ದೂರದೂರುಗಳಿಂದ ಸಾವಿರಾರು ಮಂದಿ ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.

ರಥೋತ್ಸವಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ಬಿ.ಎಸ್.ರಾಜೀವ್ ಮಾತನಾಡಿ, “ರಾಮ ಮತ್ತು ಈಶ್ವರ ಒಂದೆಡೆ ನೆಲೆಸಿರುವುದು ಅಪರೂಪ. ದೇಶದ ದಕ್ಷಿಣದ ತುತ್ತ ತುದಿಯಲ್ಲಿ ರಾವಣನೊಂದಿಗೆ ಯುದ್ಧಕ್ಕೆ ತೆರಳುವ ಮುಂಚೆ ರಾಮನು ಶಿವನನ್ನು ಪೂಜಿಸಿದ ಕ್ಷೇತ್ರ ರಾಮೇಶ್ವರವಾಗಿದ್ದರೆ, ತಾಲ್ಲೂಕಿನಲ್ಲಿ ಶ್ರೀರಾಮ ವನವಾಸದ ಕಾಲದಲ್ಲಿ ಪೂಜಿಸಲೆಂದು ಸ್ಥಾಪಿಸಿದ್ದ ಇಷ್ಟಲಿಂಗವಿರುವ ಕ್ಷೇತ್ರ ರಾಮಲಿಂಗೇಶ್ವರವೆಂದೇ ಪ್ರಸಿದ್ಧವಾಗಿದೆ. ಇದು ಪವಿತ್ರವಾದ ಕ್ಷೇತ್ರ” ಎಂದು ಹೇಳಿದರು.

ಬ್ರಹ್ಮರಥೋತ್ಸವಕ್ಕೆ ವಿವಿಧ ತಾಲ್ಲೂಕು ಹಾಗೂ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. ಸಾಕಷ್ಟು ದೂರಕ್ಕೇ ಕಾಣಬಲ್ಲ ಅತಿ ಎತ್ತರವಾದ ಧ್ವಜಸ್ತಂಭ, ದೊಡ್ಡದಾದ ಏಕಶಿಲಾ ಬಸವಣ್ಣ ಈ ದೇವಾಲಯದ ವೈಶಿಷ್ಟ್ಯ. ಬೇರೆಲ್ಲಿಯೂ ಕಾಣಸಿಗದ ಹನುಮಲಿಂಗ ದೇವಾಲಯ ಕೂಡ ಇಲ್ಲಿದೆ. ರಾಮದೊಣೆ, ಲಕ್ಷ್ಮಣದೊಣೆ ಮತ್ತು ಸೀತಾದೊಣೆಗಳೆಂಬ ನೀರಿನ ಸೆಲೆಗಳಾದ ದೊಣೆಗಳಿಲ್ಲಿವೆ. ಇವುಗಳಲ್ಲಿ ಸದಾ ನೀರು ತುಂಬಿರುತ್ತವೆ. ಅವುಗಳನ್ನು ರಾಮ ನಿರ್ಮಿಸಿದ್ದನೆಂಬ ಪ್ರತೀತಿಯಿದೆ. ಭಕ್ತರು ಅವುಗಳಿಂದ ನೀರನ್ನು ಮೊಗೆದು ತಲೆಗೆ ಸಿಂಪಡಿಸಿಕೊಳ್ಳುತ್ತಿದ್ದರು.

ರಾಮಾಯಣದ ಹಿನ್ನೆಲೆ, ಚೋಳರ ಕಾಲದ ಕೆತ್ತನೆಗಳುಳ್ಳ ದೇಗುಲ, ನೂರಾರು ವರ್ಷಗಳ ಇತಿಹಾಸ ಸಾರುವ ಶಿಲ್ಪಗಳು, ಸಾವಿರಾರು ವರ್ಷದಿಂದ ಕದಲದೇ ಇರುವ ಬೆಟ್ಟ, ಬಂಡೆ ಕಲ್ಲುಗಳು, ಸ್ಥಳೀಯರಿಂದ ನಿರ್ಮಾಣಗೊಂಡಿರುವ ಮೆಟ್ಟಿಲು ಮತ್ತು ಕಮಾನು, ಎಲ್ಲವೂ ಬೆಟ್ಟದ ಕೆಳಗಿನಿಂದ ನೋಡಿದಾಗ ಸುಂದರವಾಗಿ ಕಂಡುಬರುತ್ತದೆ.

“ಪ್ರವಾಸೋದ್ಯಮ ಇಲಾಖೆಯಿಂದ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕಾಂಪೌಂಡ್ ಕೂಡ ಹೊಸದಾಗಿ ಕಟ್ಟಲಾಗಿದೆ. ಹಿಂದೆ ದೇವಸ್ಥಾನದ ಕನ್ವೀನರ್ ಆಗಿದ್ದ ಮಟ್ಟಮರೆಡ್ಡಿ ಅವರ ಸೊಸೆ ಎಂ.ಸುನೀತ ಶ್ರೀನಿವಾಸರೆಡ್ಡಿ ಅವರು ದೇವಸ್ಥಾನದ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದು, ಬಶೆಟ್ಟೆಹಳ್ಳಿ ಗೇಟ್ ನಲ್ಲಿ 14.5 ಲಕ್ಷ ರೂಗಳ ವೆಚ್ಚದಲ್ಲಿ ಸುಂದರ ಸ್ವಾಗತ ಕಮಾನು, ಪ್ರವಾಸಿಗರು ಬಂದಾಗ ಉಳಿಯಲು ಕೋಣೆಗಳು, ಇಲ್ಲಿರುವ ನೀರಿನ ದೊಣೆಗಳ ಸುತ್ತ ರಕ್ಷಣೆಗೆ ಗ್ರಿಲ್ ಗಳು ಹಾಗೂ ದೇವಸ್ಥಾನದ ಸುತ್ತ ಕಾಂಕ್ರೀಟ್ ಹಾಕಿಸಿ, ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಜನವರಿ 5 ರ ಗುರುವಾರದಿಂದ ಜನವರಿ 10 ರ ಮಂಗಳವಾರದವರೆಗೆ ಪ್ರತಿದಿನವೂ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ. ದೂರದೂರುಗಳಿಂದ ಭಕ್ತರು ಆಗಮಿಸುವರು” ಎಂದು ಅಮ್ಮಗಾರಹಳ್ಳಿ ಬೈರಾರೆಡ್ಡಿ ತಿಳಿಸಿದರು.

“ಪವಿತ್ರ ದೇವಾಲಯವಿರುವ ರಾಮಲಿಂಗೇಶ್ವರ ಬೆಟ್ಟ ನಮ್ಮ ಜಿಲ್ಲೆಯಲ್ಲಿಯೇ ಅತ್ಯಂತ ವಿಶಿಷ್ಟವಾದುದು. ಈ ಸ್ಥಳವನ್ನು ಉತ್ತಮ ಪ್ರವಾಸಿ ತಾಣವಾಗುವಂತೆ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶವಿದೆ. ತಾಲ್ಲೂಕು ಆಡಳಿತ ಮತ್ತು ಜನಪ್ರತಿನಿಧಿಗಳು ಪ್ರವಾಸಿ ಸೌಲಭ್ಯ, ಮಾಹಿತಿ ಒದಗಿಸುವ ಮೂಲಕ ರಾಮಲಿಂಗೇಶ್ವರ ಬೆಟ್ಟವನ್ನು ಅಭಿವೃದ್ಧಿಪಡಿಸಬೇಕು. ಆಗ ವರ್ಷ ಪೂರ್ತಿ ಇಲ್ಲಿಗೆ ದೂರದೂರುಗಳಿಂದ ಪ್ರವಾಸಿಗಳು ಬಂದು ಹೋಗುವಂತಾಗುತ್ತದೆ” ಎಂದು ಕನ್ ವೀನರ್ ಎಂ.ಸುನೀತ ಶ್ರೀನಿವಾಸರೆಡ್ಡಿ ತಿಳಿಸಿದರು.

ಜೆಡಿಎಸ್ ಮುಖಂಡ ಬಿ.ಎನ್.ಸಚಿನ್, ಮಾಜಿ ಶಾಸಕ ಎಂ.ರಾಜಣ್ಣ, ಎಬಿಡಿ ಅಧ್ಯಕ್ಷ ರಾಜೀವ್ ಗೌಡ, ದೇವಾಲಯ ಸಮಿತಿ ಸದಸ್ಯರು ಹಾಜರಿದ್ದರು.

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version