
Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಘಟಕಗಳ ಸಮಾರೋಪ ಸಮಾರಂಭ ಅದ್ಧೂರಿಯಾಗಿ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ PLD ಬ್ಯಾಂಕ್ ಅಧ್ಯಕ್ಷ ಹಾಗೂ ಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, “ವಿದ್ಯಾರ್ಥಿ ಜೀವನವು ಬದುಕಿನ ಬಂಗಾರದ ದಿನಗಳು. ಈ ಹಂತದಲ್ಲಿ ಪಡುವ ಶ್ರಮವೇ ಜೀವನದ ಮುಂದಿನ ಸುಖ-ಸಂತೋಷಕ್ಕೆ ಬುನಾದಿ. ಕಣ್ಣಿಗೆ ಕಂಡ ಆಸೆಗಳಿಗೆ ಲಗಾಮು ಹಾಕುವುದನ್ನು ಕಲಿತರೆ ಮಾತ್ರ ಜೀವನದ ಗುರಿ ಮುಟ್ಟಲು ಸಾಧ್ಯ,” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
CHIMUL ನಿರ್ದೇಶಕ ಹುಜಗೂರು ರಾಮಯ್ಯ ಮಾತನಾಡಿ, “ದೇಶದ ಅಭಿವೃದ್ಧಿಯು ಯುವಕರ ಕೈಯಲ್ಲಿದೆ. ವಿದ್ಯಾವಂತರಾಗಿ, ಸಮಾಜಕ್ಕೆ ಮಾದರಿಯಾಗುವ ಸ್ಥಾನಮಾನಗಳನ್ನು ಪಡೆದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ,” ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಮುರಳಿಆನಂದ್ ಮತ್ತು ಇತರ ಅಧ್ಯಾಪಕ ವರ್ಗದವರ ಸಮ್ಮುಖದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು.