
Talakayalabetta, Sidlaghatta : “ಹಿರಿಯರು ನಿರ್ಮಿಸಿರುವ ಕೆರೆ-ಕಲ್ಯಾಣಿಗಳನ್ನು ಉಳಿಸಿಕೊಂಡರೆ ಮಾತ್ರ ಮುಂದಿನ ಪೀಳಿಗೆಗೆ ನೀರಿನ ತೊಂದರೆ ತಪ್ಪುತ್ತದೆ,” ಎಂದು ತಾಲ್ಲೂಕು ಪಂಚಾಯಿತಿ ಇಒ ಆರ್. ಹೇಮಾವತಿ ಕರೆ ನೀಡಿದರು.
ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಾಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ವೆಂಕಟಾಪುರ ಗ್ರಾಮದ ಶ್ರೀ ಭೂನೀಳಾ ಸಮೇತ ವೆಂಕಟರಮಣಸ್ವಾಮಿ ದೇವಸ್ಥಾನದ ಕಲ್ಯಾಣಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ದೇವಸ್ಥಾನಗಳ ಕಲ್ಯಾಣಿ ಅಥವಾ ಕೊಳಗಳು ಧನಾತ್ಮಕ ಶಕ್ತಿಯ ಕೇಂದ್ರಗಳು. ಹಿಂದೆ ಇವೇ ನೀರಿನ ಮುಖ್ಯ ಮೂಲಗಳಾಗಿದ್ದವು. ಕಲ್ಯಾಣಿಗಳನ್ನು ಸ್ವಚ್ಛಗೊಳಿಸುವುದರಿಂದ ಅವುಗಳ ಪುರಾತನ ವೈಭವವನ್ನು ಮರಳಿ ಪಡೆಯಲು ಸಾಧ್ಯ,” ಎಂದು ತಿಳಿಸಿದರು.
ಅಲ್ಲದೆ, ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿ ಕುರಿತು ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯದೆ ಪಂಚಾಯಿತಿಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುವ ಮೂಲಕ ಪರಿಸರ ಕಾಪಾಡಲು ಅವರು ಮನವಿ ಮಾಡಿದರು. ಈ ಕಾರ್ಯಕ್ರಮದಲ್ಲಿ ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಿಡಿಓ ಶ್ರೀನಿವಾಸಪ್ಪ, ಎಫ್.ಇ.ಎಸ್ ಸಂಸ್ಥೆಯ ಸಂಯೋಜಕರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.