
Melur, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಪಂಚಾಯಿತಿ ಕಾರ್ಯಾಲಯದಲ್ಲಿ, ಮಾರ್ಗದರ್ಶಿ ಬ್ಯಾಂಕ್ ಹಾಗೂ ಮೇಲೂರು ಗ್ರಾಮ ಪಂಚಾಯಿತಿ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮೇಲೂರು ವ್ಯಾಪ್ತಿಯ ಮಹಿಳಾ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದರು. ಮೇಲೂರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುಜಯ್ ಮಾತನಾಡಿ, “ಜೀವನ ಭದ್ರತೆ ಪ್ರತಿಯೊಬ್ಬರಿಗೂ ಅವಶ್ಯ. ಪ್ರಧಾನಮಂತ್ರಿ ಜನ್ ಧನ್ ಯೋಜನೆ, ಜೀವನ್ ಜ್ಯೋತಿ ಭೀಮಾ, ಸುರಕ್ಷಾ ಬಿಮಾ ಹಾಗೂ ಅಟಲ್ ಪಿಂಚಣಿ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡರೆ, ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಪಡೆಯಬಹುದು” ಎಂದು ತಿಳಿಸಿದರು.
ಅವರು 60 ವರ್ಷಗಳ ನಂತರ ಪಿಂಚಣಿ ಪಡೆಯುವ ಅವಕಾಶ, ಶೂನ್ಯ ಬಾಲೆನ್ಸ್‌ನಲ್ಲಿಯೇ 2 ಲಕ್ಷದ ಅಪಘಾತ ವಿಮೆ, ವಾರ್ಷಿಕ ಕೇವಲ ₹436 ಕ್ಕೆ 2 ಲಕ್ಷದ ಜೀವ ವಿಮೆ ಹಾಗೂ ಕೇವಲ ₹20 ಕ್ಕೆ ಅಪಘಾತ ವಿಮೆ ಸೌಲಭ್ಯ ಲಭ್ಯವಿರುವುದನ್ನು ವಿವರಿಸಿದರು. ಜೊತೆಗೆ, ಪಿಂಚಣಿ ಯೋಜನೆಗೆ ಚಂದಾದಾರರಾಗಲು ಪ್ರೋತ್ಸಾಹಿಸಿದರು.
ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾರಮೇಶ್ ಮಾತನಾಡಿ, “ಇಂದಿನ ಸಮಾಜದಲ್ಲಿ ಹಿರಿಯ ಪೋಷಕರನ್ನು ನಿರ್ಲಕ್ಷಿಸುವ ಪರಿಸ್ಥಿತಿ ಹೆಚ್ಚಾಗಿದೆ. ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಿ, ಉಳಿತಾಯ ಹಾಗೂ ವಿಮಾ ಯೋಜನೆಗಳನ್ನು ಬಳಸಿಕೊಂಡರೆ, ವೃದ್ಧಾಪ್ಯದಲ್ಲಿ ಅದು ಪೋಷಕವಾಗುತ್ತದೆ” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಆರ್.ಎ. ಉಮೇಶ್, ಪ್ರಿಯಾಂಕ, ಕಾರ್ಯದರ್ಶಿ ಪಿ.ಎನ್. ಶ್ರೀನಿವಾಸರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.