
Jangamakote, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಗ್ರಾಮ ಪಂಚಾಯಿತಿ ಜಂಗಮಕೋಟೆ ಇವರ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ತರಬೇತಿ ಕಾರ್ಯಾಗಾರ ಆಯೋಜನೆ ಮಾಡಲಾಗಿತ್ತು.
ಜಂಗಮಕೋಟೆ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಂದ ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಡಾ. ಕೆ.ಪಾರ್ಥಸಾರಥಿ ನಾಯ್ಡು ಮಾತನಾಡಿ, ಈ ದೇಶದಲ್ಲಿನ ಹುಟ್ಟಿ, ಇಲ್ಲೆ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿಗೂ ಜೀವನ ಭದ್ರತೆಯನ್ನು ಒದಗಿಸಬೇಕೆನ್ನುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡರೆ, 60 ವರ್ಷದ ನಂತರ ಸಾಯುವ ತನಕ ಮಾಸಿಕ ಪಿಂಚಣಿ ಪಡೆಯಲು ಅರ್ಹರಾಗುತ್ತೀರಿ. ಪ್ರಧಾನ ಮಂತ್ರಿ ಜನ್ ಧನ್ ಖಾತೆ ತೆರೆದು, ಡೆಬಿಟ್ ಕಾರ್ಡ್ ಮೂಲಕ ವ್ಯವಹರಿಸಿದರೆ ಶೂನ್ಯ ಬಾಲೆನ್ಸ್ ನಲ್ಲಿ 2 ಲಕ್ಷದ ವರೆಗೂ ಅಪಘಾತ ವಿಮೆ ಪಡೆಯಬಹುದಾಗಿದೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿ 18-50 ವರ್ಷದೊಳಗಿನವರು ವಾರ್ಷಿಕ 436 ರೂಪಾಯಿ ಪಾವತಿಸಿದರೆ 2 ಲಕ್ಷದ ವರೆಗೂ ಜೀವ ವಿಮಾ ರಕ್ಷಣೆ ಪಡೆಯಬಹುದಾಗಿದೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವರ್ಷಕ್ಕೆ ಕೇವಲ 20 ರೂಪಾಯಿ ವಿಮೆ ಕಟ್ಟಿದರೆ 2 ಲಕ್ಷ ತನಕ ಅಪಘಾತ ವಿಮಾ ರಕ್ಷಣೆ ಸಿಗಲಿದೆ. ಅಟಲ್ ಪಿಂಚಣಿ ಯೋಜನೆಗೆ ಚಂದಾದಾರಿಕೆ 18-40 ವರ್ಷದೊಳಗಿನವರು ತಿಂಗಳಿಗೆ 1 ಸಾವಿರದಿಂದ 5 ಸಾವಿರದವರೆಗೂ ಪಿಂಚಣಿ ಪಡೆಯಬಹುದು. ಪಿಎಂಜೆಡಿವೈ ಖಾತೆಗಳಿಗೆ ಹಾಗೂ ನಿಷ್ಕ್ರೀಯವಾಗಿರುವ ಖಾತೆಗಳಿಗೆ ಕೆ.ವೈ.ಸಿ.ನವೀಕರಿಸಿಕೊಳ್ಳಬೇಕು ಇಲ್ಲವಾದರೆ, ಸರ್ಕಾರದ ಸೌಲಭ್ಯಗಳು ನಿಮಗೆ ದೊರೆಯುವುದಿಲ್ಲ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಮಾತನಾಡಿ, ಹೆತ್ತ ತಂದೆ, ತಾಯಿಗಳನ್ನು ಅನಾಥಾಶ್ರಮಗಳಿಗೆ ಬಿಟ್ಟು ಬರುವಂತಹ ಸನ್ನಿವೇಶಗಳನ್ನು ಕಣ್ಣಾರೆ ಕಾಣುತ್ತಿದ್ದೇವೆ. ಪ್ರತಿಯೊಬ್ಬರೂ ತಮ್ಮ ಭವಿಷ್ಯದ ಬಗ್ಗೆ ಚಿಂತನೆ ಮಾಡಬೇಕು, ನಿಮ್ಮ ಉಳಿತಾಯ ಖಾತೆಗಳ ಮೂಲಕ ವಿಮೆ ಕಟ್ಟಿಕೊಂಡು, ಉಳಿತಾಯ ಮಾಡಿಕೊಂಡರೆ, 60 ವರ್ಷಗಳ ನಂತರ, ಅದು ನಿಮ್ಮನ್ನು ಪೋಷಣೆ ಮಾಡುತ್ತದೆ. ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಮನೆಗಳಲ್ಲಿ ಗಂಡಸರ ಖಾತೆಗಳಿಂದಲೂ ವಿಮೆ ಕಟ್ಟಿಸುವ ಮೂಲಕ ಪಿಂಚಣಿ ಸೌಲಭ್ಯಗಳಿಗೆ ಅರ್ಹರಾಗಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಮ್ಮ, ಶಿಡ್ಲಘಟ್ಟ ಶಾಖಾ ವ್ಯವಸ್ಥಾಪಕ ಮಲ್ಲಾರೆಡ್ಡಿ, ಜಂಗಮಕೋಟೆ ಬ್ಯಾಂಕಿನ ವ್ಯವಸ್ಥಾಪಕ ಶಿವಶಂಕರ್ ರೆಡ್ಡಿ, ತಾಲ್ಲೂಕು ಪಂಚಾಯಿತಿ ಎಫ್.ಎಲ್.ಸಿ.ಆರ್.ಪಿ. ಅಮರಾವತಿ, ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಹಾಜರಿದ್ದರು.