
Sidlaghatta : ಅಂಗನವಾಡಿ ಕೇಂದ್ರಗಳ ಫಲಾನುಭವಿಗಳ ಮುಖ ಚರ್ಯೆ ಗುರ್ತಿಸುವ ಎಫ್.ಆರ್.ಎಸ್(ಫೇಸ್ ರೀಡಿಂಗ್ ಸಿಸ್ಟಂ) ಯೋಜನೆಯನ್ನು ಕೈ ಬಿಡಲು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಗುರುವಾರ ಕೈಗೆ ಕಪ್ಪು ಪಟ್ಟಿ ಧರಿಸಿ, ಕಪ್ಪು ವಸ್ತ್ರ ಧರಿಸಿ ಪ್ರತಿಭಟನೆ ನಡೆಸಿದರು.
ನಗರದ ಚಿಕ್ಕಬಳ್ಳಾಪುರ ಮಾರ್ಗದಲ್ಲಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ಅಂಗನವಾಡಿ ಫಲಾನುಭವಿಗಳ ಮುಖಚರ್ಯೆ ಗುರ್ತಿಸುವ ಎಫ್.ಆರ್.ಎಸ್ ಯೋಜನೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿವೆ. ಇದರಿಂದ ನಾವು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದರು.
ಹಾಗಾಗಿ ಎಫ್.ಆರ್.ಎಸ್ ಯೋಜನೆಯಲ್ಲಿ ಇರುವ ತಾಂತ್ರಿಕ ದೋಷಗಳನ್ನು ಸರಿಪಡಿಸುವ ತನಕ ಎಫ್.ಆರ್.ಎಸ್ ಯೋಜನೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಮಕ್ಕಳ ಮತ್ತು ಮಹಿಳೆಯರ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರವಹಿಸುವ ಐಸಿಡಿಎಸ್ ಯೋಜನೆಗೆ 50 ವರ್ಷಗಳು ತುಂಬಿದ್ದು ಯೋಜನೆಯನ್ನು ಖಾಯಂ ಮಾಡಬೇಕು, ಅನುದಾನವನ್ನು ಹೆಚ್ಚು ಮಾಡಬೇಕು. ಗುಜರಾತ್‌ನ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನವೆಂಬರ್ ನಲ್ಲಿ ಕೇಂದ್ರ ಸಚಿವರಿಗೆ ಸಹಿ ಸಂಗ್ರಹ ಮಾಡಿ ಪತ್ರ ಕಳುಹಿಸುವ ಅಭಿಯಾನ ನಡೆಸುತ್ತೇವೆ ಮತ್ತು ಡಿಸೆಂಬರ್ ನಲ್ಲಿ ಸಚಿವರ ಮನೆ ಮುಂದೆ ಧರಣಿ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಸಿಡಿಪಿಒ ವಿದ್ಯಾ ವಸ್ತ್ರದ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಅಶ್ವತ್ಥಮ್ಮ, ಕಾರ್ಯದರ್ಶಿ ಭಾಗ್ಯಮ್ಮ, ಖಜಾಂಚಿ ಉಮಾದೇವಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.