
Talakayalabetta, Sidlaghatta, chikkaballapur : “ಪ್ರತಿಯೊಬ್ಬರೂ ಬ್ಯಾಂಕ್ ವಹಿವಾಟು, ಜೀವ–ಆರೋಗ್ಯ ವಿಮೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಇದರಿಂದ ಆರ್ಥಿಕ ಸುರಕ್ಷತೆ ಹೆಚ್ಚಿ ಜೀವನ ಗುಣಮಟ್ಟವೂ ಉತ್ತಮವಾಗುತ್ತದೆ,” ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಿಡ್ಲಘಟ್ಟ ತಾಲ್ಲೂಕಿನ ಆರ್ಥಿಕ ಸಾಕ್ಷರತಾ ಸಲಹೆಗಾರ ಎಂ. ಮಲ್ಲಾರೆಡ್ಡಿ ಹೇಳಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ದಿಬ್ಬೂರಹಳ್ಳಿಯ ಕೆನರಾ ಬ್ಯಾಂಕ್ ಶಾಖೆಯಿಂದ ಆಯೋಜಿಸಿದ್ದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಅಭಿಯಾನ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಯಾರೇ ಆಗಲಿ — ರೈತ, ಉದ್ಯೋಗಿ, ವ್ಯಾಪಾರಿ ಅಥವಾ ನೌಕರ — ಎಲ್ಲರೂ ಬ್ಯಾಂಕ್ ಖಾತೆ ತೆರೆಯಬೇಕು. ಸರ್ಕಾರದ ಎಲ್ಲಾ ಸೌಲಭ್ಯಗಳು ಇಂದಿಗೆ ನೇರವಾಗಿ ಬ್ಯಾಂಕ್ ಖಾತೆ ಮೂಲಕವೇ ಸಿಗುತ್ತಿವೆ. ಉಳಿತಾಯ ಅಭ್ಯಾಸ ಬೆಳೆಸಬೇಕು ಮತ್ತು ಎಲ್ಲಾ ಹಣಕಾಸು ವ್ಯವಹಾರಗಳು ಬ್ಯಾಂಕ್ ಮೂಲಕ ನಡೆಯಬೇಕು,” ಎಂದು ಸಲಹೆ ನೀಡಿದರು.
ಅವರು ಪಿಎಂಜೆಡಿವೈ, ಪಿಎಂಜೆಜೆಬಿವೈ, ಪಿಎಂಎಸ್ಬಿವೈ, ಅಟಲ್ ಪೆನ್ಷನ್ ಯೋಜನೆ, ಕೃಷಿ ಕರ್ಡ್ (KCC) ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ನೀಡಿದರು. “ಪ್ರತಿ ಖಾತೆಯಲ್ಲಿಯೂ ನಾಮನಿರ್ದೇಶನ (Nominee) ಮಾಡುವುದು ಅತ್ಯಂತ ಮುಖ್ಯ. ಇಲ್ಲದಿದ್ದರೆ ನಂತರ ನ್ಯಾಯಾಲಯ ಅಥವಾ ತಹಶೀಲ್ದಾರ್ ಕಚೇರಿಯಿಂದ ಪ್ರಮಾಣ ಪತ್ರ ಪಡೆಯುವುದು ತುಂಬಾ ಕಷ್ಟಕರ,” ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಂಬಂಧಿಸಿದ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರಮಣಪ್ಪ, ಪಿಡಿಒ ಶ್ರೀನಿವಾಸಪ್ಪ, ಕೆನರಾ ಬ್ಯಾಂಕ್ ಅಧಿಕಾರಿಗಳು ಕರುಣಾಕರನ್ ಮತ್ತು ಮಮತ ಹಾಜರಿದ್ದರು.