Sidlaghatta, Chikkaballapur : ಶಿಡ್ಲಘಟ್ಟ ನಗರಸಭೆ ವ್ಯಾಪ್ತಿಯಲ್ಲಿನ ಆಸ್ತಿಗಳ ಇ-ಖಾತಾ ಕಡತಗಳ ವಿಲೇವಾರಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವುದು ಮತ್ತು ನಾಗರಿಕರನ್ನು ಅನವಶ್ಯಕವಾಗಿ ಅಲೆದಾಡಿಸುತ್ತಿರುವುದು ಕುರಿತು ಶಾಸಕ ಬಿ.ಎನ್. ರವಿಕುಮಾರ್ ಅವರು ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರ ಮುಂದೆಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಧ್ಯವರ್ತಿಗಳ ಮೂಲಕ ಅಥವಾ ನಗರಸಭೆಯ ಕೆಲ ಸದಸ್ಯರ ಶಿಫಾರಸಿನ ಮೇರೆಗೆ ಬಂದ ಕಡತಗಳನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದ್ದು, ನೇರವಾಗಿ ಆಸ್ತಿ ಮಾಲೀಕರು ಸಲ್ಲಿಸಿದ ಅರ್ಜಿಗಳನ್ನು ಕಾರಣವಿಲ್ಲದೆ ಬಾಕಿ ಇಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆ ಶಾಸಕರು ನಗರಸಭೆಗೆ ನೇರವಾಗಿ ಭೇಟಿ ನೀಡಿದರು.
ಪೌರಾಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಶಾಸಕರು ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳ ಜೊತೆ ಇ-ಖಾತಾ ಕಡತಗಳ ಪ್ರಗತಿ, ಬಾಕಿ ಇರುವ ಕಡತಗಳ ಸಂಖ್ಯೆ ಮತ್ತು ತಡವಾದ ಕಾರಣಗಳ ಕುರಿತು ಚರ್ಚೆ ನಡೆಸಿದರು.
ಅಧಿಕಾರಿಗಳಿಂದ ಕಡತ ವಿಲೇವಾರಿ ಮಾನದಂಡಗಳ ಬಗ್ಗೆ ವಿವರ ಪಡೆದು, “ಸಾರ್ವಜನಿಕರಿಂದ ಬಂದಿರುವ ದೂರುಗಳು ಗಂಭೀರವಾಗಿವೆ. ಇಂತಹ ಅಸಮಾನತೆಗಳು ಮತ್ತೆ ನಡೆಯಬಾರದು. ಮಧ್ಯವರ್ತಿಗಳ ಪ್ರಭಾವದಿಂದ ನಾಗರಿಕರನ್ನು ತೊಂದರೆಪಡಿಸುವ ಕೆಲಸ ಬೇಡ” ಎಂದು ಶಾಸಕರು ಎಚ್ಚರಿಸಿದರು.
ಈ ವೇಳೆ ಪೌರಾಯುಕ್ತೆ ಜಿ. ಅಮೃತ ಅವರು ಸ್ಪಷ್ಟಪಡಿಸುತ್ತಾ, “ನೇರವಾಗಿ ಆಸ್ತಿ ಮಾಲೀಕರು ಕಡತ ಸಲ್ಲಿಸಲು ಸೂಚನೆ ನೀಡಲಾಗಿದೆ. ಮಧ್ಯವರ್ತಿಗಳಿಂದ ಬಂದ ಕಡತಗಳನ್ನು ಸ್ವೀಕರಿಸಲಾಗುತ್ತಿಲ್ಲ,” ಎಂದು ತಿಳಿಸಿದರು.
ಅವರು ಮುಂದುವರೆದು, “ಸಿಬ್ಬಂದಿ ಕೊರತೆ ಮತ್ತು ಸಮೀಕ್ಷೆ, ಕಂದಾಯ ವಸೂಲಿ ಮುಂತಾದ ಕೆಲಸಗಳ ಹಿನ್ನೆಲೆ ಕಡತ ವಿಲೇವಾರಿ ತಡವಾಗುತ್ತಿದೆ. ಶೀಘ್ರದಲ್ಲೇ ಎಲ್ಲಾ ಬಾಕಿ ಕಡತಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ,” ಎಂದರು.
For Daily Updates WhatsApp ‘HI’ to 7406303366
