
Sidlaghatta : ನಗರಸಭೆ ಪೌರಾಯುಕ್ತೆ ಜಿ.ಅಮೃತ ಅವರು ಅತಿಯಾದ ಕಾರ್ಯದೊತ್ತಡದಿಂದಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವಾಗಲೆ ಅಸ್ವಸ್ಥಗೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ನಗರಸಭೆಯ ತಮ್ಮ ಕಚೇರಿಯಲ್ಲಿ ಇ ಖಾತೆಯ ಕಡತಗಳ ವಿಲೇವಾರಿ ಮಾಡುತ್ತಿದ್ದ ಜಿ.ಅಮೃತ ಅವರು ಏಕಾ ಏಕಿ ನಿತ್ರಾಣಗೊಂಡು ಅಸ್ವಸ್ಥಗೊಂಡಿದ್ದಾರೆ. ಕೂಡಲೆ ಅವರನ್ನು ಅಲ್ಲಿದ್ದ ಸಿಬ್ಬಂದಿ ಮತ್ತು ನಗರಸಭೆಯ ಕೆಲ ಸದಸ್ಯರು ಆರೈಕೆ ಮಾಡಿದ್ದಾರೆ.
ನಗರಸಭೆ ಕಚೇರಿಯ ಎದುರು ಇರುವ ಖಾಸಗಿ ಆಸ್ಪತ್ರೆಯ ಡಾ.ಸತ್ಯನಾರಾಯಣರಾವ್ ಅವರನ್ನು ಕಚೇರಿಗೆ ಕರೆಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಆಂಬ್ಯುಲೆನ್ಸ್‌ನಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮುಂದುವರೆಸಿದ್ದು ಚೇತರಿಸಿಕೊಂಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ನಗರಸಭೆ ಕಚೇರಿ ಮುಂದೆ ಜನ ಜಂಗುಳಿಯೆ ನೆರೆದಿತ್ತು. ಜಿಲ್ಲಾ ಯೋಜನಾಕಾರಿ ಸೇರಿದಂತೆ ಹಲವು ಅಕಾರಿಗಳು, ನಗರಸಭೆ ಸದಸ್ಯರು, ಪ್ರಮುಖರು ಆಸ್ಪತ್ರೆಗೆ ಭೇಟಿ ನೀಡಿ ಪೌರಾಯುಕ್ತರ ಕ್ಷೇಮ ವಿಚಾರಿಸಿದರು.
ಇತ್ತೀಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇ ಖಾತೆಗಳ ವಿಲೇವಾರಿ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ಕೇಳಿದ್ದು ವಿಲೇವಾರಿ ಕುಂಠಿತಗೊಂಡ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇತ್ತೀಷೆಗಷ್ಟೆ ಪೌರಾಯುಕ್ತರಾಗಿ ಅಧಿಕಾರವಹಿಸಿಕೊಂಡಿದ್ದ ಅಮೃತ ಅವರು ಕಳೆದ ಎರಡು ಮೂರು ದಿನಗಳಿಂದ ಬಿಡುವಿಲ್ಲದೆ ಕಡತಗಳ ವಿಲೇವಾರಿಯಲ್ಲಿ ತೊಡಗಿದ್ದು ಅದು ನಿತ್ರಾಣಕ್ಕೆ ಕಾರಣ ಎನ್ನಲಾಗಿದೆ.