
Jangamakote, sidlahgatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಗ್ರಾಮದ ಸ್ಮಶಾನದಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಕಳೆಗಿಡಗಳನ್ನು ಸ್ವಚ್ಚಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಇದುವರೆಗೂ ಸ್ವಚ್ಚಗೊಳಿಸಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ಜಂಗಮಕೋಟೆ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ, ಇದೇ ಸ್ಮಶಾನದಲ್ಲೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಶವವನ್ನು ಹೊತ್ತುಕೊಂಡು ಒಳಗೆ ಹೋಗುವುದಕ್ಕೂ ಜಾಗವಿಲ್ಲ. ಪಾರ್ಥೆನಿಯಂ ಗಿಡಗಳು, ಮುಳ್ಳುಗಿಡಗಳು ದಟ್ಟವಾಗಿ ಬೆಳೆದು ನಿಂತಿವೆ.
ವಿದ್ಯುತ್ ದೀಪದ ವ್ಯವಸ್ಥೆಯಿಲ್ಲ, ರಾತ್ರಿಯ ವೇಳೆ ಅಂತ್ಯ ಸಂಸ್ಕಾರ ಮಾಡಬೇಕಾದಂತಹ ಪರಿಸ್ಥಿತಿ ಎದುರಾದರೆ, ಮೊಬೈಲ್ ಟಾರ್ಚರ್ ಗಳನ್ನು ಹಿಡಿದುಕೊಂಡು ಅಂತ್ಯ ಸಂಸ್ಕಾರ ಮಾಡಬೇಕಿದೆ. ಅಂತ್ಯ ಸಂಸ್ಕಾರ ಮಾಡಿಕೊಂಡು ಮನೆಗಳಿಗೆ ವಾಪಸ್ಸು ಹೋಗುವಾಗ ಕಾಲುಗಳು ತೊಳೆದುಕೊಂಡು ಹೋಗುವುದು ಮೊದಲಿನಿಂದಲೂ ಸಂಪ್ರದಾಯವಿದೆ. ಮೊದಲೆಲ್ಲಾ ಕುಂಟೆಗಳಲ್ಲಿ ನೀರು ಇರುತ್ತಿತ್ತು. ಅಲ್ಲೆ ಕೈ ಕಾಲುಗಳು ತೊಳೆದುಕೊಂಡು ಮನೆಗಳಿಗೆ ಹೋಗುತ್ತಿದ್ದರು. ಈಗ ಕುಂಟೆಗಳು ಬತ್ತಿಹೋಗಿವೆ. ಸ್ಮಶಾನದಲ್ಲೆ ಒಂದು ಸಿಸ್ಟನ್ ಅಳವಡಿಕೆ ಮಾಡಿ, ಅದಕ್ಕೆ ನೀರು ಪೂರೈಕೆ ಮಾಡಿದರೆ, ತುಂಬಾ ಅನುಕೂಲವಾಗುತ್ತದೆ.
ಯಾರಾದರೂ ಮೃತಪಟ್ಟರೆ, ಅವರ ಸಂಬಂಧಿಕರು ಬಂದು ಎಲ್ಲಿ ಅಂತ್ಯಸಂಸ್ಕಾರ ಮಾಡಲಾಗುತ್ತದೆಯೋ ಅಲ್ಲಿ ಮಾತ್ರ ಗಿಡಗಂಟಿಗಳನ್ನು ಸ್ವಚ್ಚ ಮಾಡಿಕೊಂಡು, ಮಾಡುತ್ತಿದ್ದಾರೆ. ಹಳ್ಳಿಗಳ ಸ್ವಚ್ಚತೆಗೆ ಆಧ್ಯತೆ ಕೊಡುವ ಪ್ರಕಾರ, ಸ್ಮಶಾನಗಳಲ್ಲೂ ಸ್ವಚ್ಚತೆಗೆ ಆಧ್ಯತೆ ಕೊಡಬೇಕು ಎಂದು ಗ್ರಾಮದ ಮನೋಜ್ ಮತ್ತು ಮುನಿಯಪ್ಪ ಒತ್ತಾಯಿಸಿದರು.
ಸ್ಮಶಾನದಲ್ಲಿ ಓಡಾಡುವುದಕ್ಕೆ ರಸ್ತೆ ಮಾಡಬೇಕು, ಸುತ್ತಲೂ ವಿದ್ಯುತ್ ದೀಪಗಳನ್ನು ಅಳವಡಿಕೆ ಮಾಡಬೇಕು, ನೀರಿನ ವ್ಯವಸ್ಥೆ ಮಾಡಬೇಕು, ಶವಗಳನ್ನು ತೆಗೆದುಕೊಂಡು ಬಂದಾಗ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಕಟ್ಟಡವನ್ನು ನಿರ್ಮಾಣ ಮಾಡಬೇಕು. ಈ ಬಗ್ಗೆ ಗ್ರಾಂ ಪಂಚಾಯಿತಿಯವರು ವಿಶೇಷ ಗಮನಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.