
Sidlaghatta : ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ SSLC, PUC ಯಲ್ಲಿ ಆಯಾ ಜಿಲ್ಲೆಯಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನಗದು ಹಣದೊಂದಿಗೆ ನಡೆಸಿಕೊಟ್ಟು ಪ್ರೋತ್ಸಾಹಿಸಲಾಗುತ್ತಿದೆ ಎಂದು ಬ್ರಾಹ್ಮಣ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ತಿಳಿಸಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಬ್ರಾಹ್ಮಣ ಸಂಘಕ್ಕೆ 50 ವರ್ಷಗಳು ತುಂಬಿದ ಹಿನ್ನಲೆಯಲ್ಲಿ ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ಶ್ರೀವೆಂಕಟರಮಣಸ್ವಾಮಿ ದೇವಾಲಯ ಆವರಣದಲ್ಲಿ ಕೀರ್ತಿಶೇಷ ಪಲಿಚೇರ್ಲು ಪಿ.ಎಸ್.ಕೃಷ್ಣಮೂರ್ತಿರಾವ್ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸುವರ್ಣ ಸಂಭ್ರಮ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕಾಗಿ 12 ಕೋಟಿ ರೂ ಅನುದಾನ ಇದೆ. ರಾಜ್ಯದ ಉದ್ದಗಲಕ್ಕೂ ಪ್ರತಿ ವರ್ಷ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಸ್ವಯಂ ಉದ್ಯೋಗಕ್ಕಾಗಿ ಮಂಡಳಿಯಿಂದ 2 ಲಕ್ಷ ಸಾಲ ನೀಡಲಿದ್ದು ಶೇ 20ರಷ್ಟು ಅಂದರೆ 40 ಸಾವಿರ ರೂ ಸಬ್ಸಿಡಿ ನೀಡಲಾಗುವುದು. ಅಗತ್ಯ ಇರುವ ಎಲ್ಲರೂ ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ದೀರ್ಘಾವಧಿ ಬಳಕೆಗಾಗಿ 100 ಕೋಟಿ ರೂಗಳ ಕಾರ್ಪಸ್ ನಿಧಿಯನ್ನು ಆರಂಭಿಸಲು ಚಿಂತನೆ ನಡೆದಿದೆ. ರಾಜ್ಯದಲ್ಲಿ ಆರ್ಥಿಕವಾಗಿ, ರಾಜಕೀಯವಾಗಿ ಸಬಲರಾಗಿರುವ 10 ಸಾವಿರ ಮಂದಿಯನ್ನು ಗುರ್ತಿಸಿ ಅವರಿಂದ ತಲಾ 1 ಲಕ್ಷ ರೂ ನಿಧಿ ಸಂಗ್ರಹಿಸಲಾಗುವುದು. ಈಗಾಗಲೆ 60 ಮಂದಿಯಿಂದ 60 ಲಕ್ಷ ರೂ ನಿಧಿ ಸಂಗ್ರಹಿಸಿದ್ದು ನಿಧಿ ಸಂಗ್ರಹ ಕಾರ್ಯ ನಿರಂತರವಾಗಿ ನಡೆಯಲಿದೆ ಎಂದರು.
ಪ್ರೇರಕ ಭಾಷಣಕಾರ, ಚಿಂತಕ ವೈ.ವಿ.ಗುಂಡೂರಾವ್ ಮಾತನಾಡಿ, ಬ್ರಾಹ್ಮಣತ್ವ ನಮ್ಮ ಮನೆಯಲ್ಲಿರಬೇಕು, ಮನೆಯ ಹೊಸಿಲಿನಿಂದ ಆಚೆ ಆಚರಣೆ ಸಲ್ಲದು ಎಂದರು.
ನಾವೆಲ್ಲರೂ ಹಿಂದೂಗಳು, ಬ್ರಾಹ್ಮಣ ಎಂದರೆ ಅದು ಒಂದು ಜಾತಿ ಧರ್ಮ ಅಲ್ಲ, ಜ್ಞಾನ ಇರುವ ಎಲ್ಲರೂ ಬ್ರಾಹ್ಮಣರೆ. ನಾವು ನಮ್ಮ ಧರ್ಮವನ್ನು ಉಳಿಸಿಕೊಂಡು ಎಲ್ಲರನ್ನೂ ಜತೆಗೂಡಿಸಿಕೊಂಡು ಸಮಾಜದಲ್ಲಿ ಸಾಗಬೇಕು, ಬ್ರಾಹ್ಮಣರು ಸಮಾಜದ ನಾಯಕತ್ವವನ್ನು ವಹಿಸಿಕೊಳ್ಳಬೇಕು. ನಾವು ಚೆನ್ನಾಗಿದ್ದು, ಇತರರ ಹಿತ ಬಯಸುವವನೆ ಬ್ರಾಹ್ಮಣ ಎಂದರು.
ವಂದೇ ಮಾತರಂ ಪಾಠಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ.ಜಿ.ಬಿ.ಹರೀಶ್ ಅವರು ಪ್ರೇರಣಾ ಭಾಷಣ ಮಾಡಿದರು. ನೀಹಾರಿಕಾ ಅವರ ಭರತನಾಟ್ಯ ಗಮನ ಸೆಳೆಯಿತು. ತಲಕಾಯಲಬೆಟ್ಟ ಬ್ರಾಹ್ಮಣ ಸಂಘದ ಅಧ್ಯಕ್ಷ ಶಂಕರ್ ದಂಪತಿ ಸೇರಿದಂತೆ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ಮಹಿಳಾ ಸಂಘದಿಂದ ನಡೆದ ಕ್ರೀಡಾ ಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಲಕಾಯಲಬೆಟ್ಟ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಆರ್.ಶಂಕರ್ ಅಧ್ಯಕ್ಷತೆವಹಿಸಿದ್ದರು. ಮಾಜಿ ಸಚಿವ ವಿ.ಮುನಿಯಪ್ಪ, ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ತಾಲ್ಲೂಕು ಅಧ್ಯಕ್ಷ ಸೀಕಲ್ ಆನಂದ ಗೌಡ, ಮಾಜಿ ಶಾಸಕ ಎಂ.ರಾಜಣ್ಣ, ಪುಟ್ಟು ಆಂಜಿನಪ್ಪ, ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಜಿಲ್ಲಾ ಪ್ರತಿನಿಧಿ ಪಲಿಚೇರ್ಲು ಪ್ರಕಾಶ್, ಶಂಕರ ಸೇವಾ ಸಮಿತಿ ಅಧ್ಯಕ್ಷ ಮೋಕ್ಷಗುಂಡಂ ಸೂರ್ಯಕುಮಾರ್, ಗಾಯಿತ್ರಿ ಮಹಿಳಾ ಮಂಡಳಿ ಆಧ್ಯಕ್ಷ ವಿಜಯಲಕ್ಷ್ಮಿ, ಡಾ.ಡಿ.ಟಿ.ಸತ್ಯನಾರಾಯಣರಾವ್, ವಿಪ್ರ ಪ್ರತಿಭಾ ಪುರಸ್ಕಾರ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಹಾಜರಿದ್ದರು.