
Sidlaghatta : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ಸೆ.17ರಂದು ಆಚರಿಸಲಿದ್ದು ಹುಟ್ಟು ಹಬ್ಬದ ಅಂಗವಾಗಿ ವಿವಿಧ ಸೇವಾ ಕಾರ್ಯಗಳನ್ನು 15 ದಿನಗಳ ಕಾಲ ನಿರಂತರವಾಗಿ ಹಮ್ಮಿಕೊಂಡಿದ್ದೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.
ಬಿಜೆಪಿ ಸೇವಾ ಸೌಧ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸೆ.17ರಂದು ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಆಚರಿಸಲಿದ್ದು ಅಂದು ರಕ್ತದಾನ ಶಿಬಿರ, ಸ್ವಚ್ಚತಾ ಕಾರ್ಯಕ್ರಮ ಹಾಗೂ ಆರೋಗ್ಯ ಶಿಬಿರವನ್ನು ಕೂಡ ಹಮ್ಮಿಕೊಂಡಿದ್ದೇವೆ. ಅಂದೇ ಪ್ರಧಾನಿ ಮೋದಿ ಅವರ ಜೀವನ ಆಧಾರಿತ ಕಿರು ಚಿತ್ರ ಪ್ರದರ್ಶನ ನಡೆಯಲಿದೆ ಎಂದರು.
ಸೆ.19ರಂದು ಪ್ರಬುದ್ಧರಿಂದ ವಿಚಾರ ಗೋಷ್ಠಿ, ಸಾಕ್ಷ್ಯ ಚಿತ್ರ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, 21ರಂದು ಮೋದಿ ವಿಕಾಸ್ ಮ್ಯಾರಾಥಾನ್ ನಡಿಗೆ ಜಾಥಾ, ಸಂಸದ್ ಖೇಲ್ ಕ್ರೀಡಾ ಸ್ಪರ್ಧೆ, 25ರಂದು ಪಂಡಿತ್ ದೀನ ದಯಾಳ್ ಉಪಾಧ್ಯಾಯ ಅವರ ಜನ್ಮ ದಿನಾಚರಣೆ ಹಾಗೂ ವೋಕಲ್ ಫಾರ್ ಲೋಕಲ್ ಅಭಿಯಾನವೂ ನಡೆಯಲಿದೆ.
ಸೆ.27ರಂದು ದಿವ್ಯಾಂಗರು ಮತ್ತು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ, ಅ.2ರಂದು ಮಹಾತ್ಮಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಹಾಗೂ ವಿಕಸಿತ ಭಾರತ ಕುರಿತು ಚಿತ್ರ ಕಲೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳು, ದೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.