
Kalanayakanahalli, Jangamakote, Sidlaghatta : “ನಮ್ಮ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಶ್ರಮ, ತಂತ್ರಜ್ಞಾನ ಮತ್ತು ನಿಪುಣತೆಯಲ್ಲಿ ಇಸ್ರೇಲ್ ದೇಶದ ರೈತರಿಗಿಂತಲೂ ಮುಂದೆ ಇದ್ದಾರೆ. ಅವರು ನಿಜವಾದ ಅರ್ಥದಲ್ಲಿ ತಂತ್ರಜ್ಞಾನಿ ರೈತರು” ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಸುರೇಶ್ ಅವರು ಪ್ರಶಂಸಿಸಿದರು.
ಅವರು ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಕಾಳನಾಯಕನಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಕೃಷಿ ಕ್ಷೇತ್ರೋತ್ಸವ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುಲಪತಿಗಳು ಮುಂದುವರಿದು, “ಇಸ್ರೇಲ್ ಕೃಷಿ ತಂತ್ರಜ್ಞಾನದಲ್ಲಿ ವಿಶ್ವದ ಗಮನ ಸೆಳೆದಿದ್ದರೆ, ನಮ್ಮ ಕೋಲಾರ-ಚಿಕ್ಕಬಳ್ಳಾಪುರ ಭಾಗದ ರೈತರು ವೈಜ್ಞಾನಿಕ ಪದ್ಧತಿಯಲ್ಲಿ ಕೃಷಿ ಮಾಡಿ ನಷ್ಟದಾಯಕವಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ನೈಸರ್ಗಿಕ ಸಂಪತ್ತಿನ ಸದ್ಬಳಕೆ ಮಾಡಿ ಮಾದರಿ ವ್ಯವಸಾಯ ನಡೆಸುತ್ತಿದ್ದಾರೆ,” ಎಂದು ಶ್ಲಾಘಿಸಿದರು.
ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೆ.ಎಂ. ಭೀಮೇಶ್ ಮಾತನಾಡಿ, “ಜಿಕೆವಿಕೆ ವಿದ್ಯಾರ್ಥಿಗಳು ಮೂರು ತಿಂಗಳ ಕಾಲ ನಮ್ಮೂರಲ್ಲಿ ನೆಲೆಸಿದ್ದು, ಗ್ರಾಮಸ್ಥರೊಂದಿಗೆ ಬೆರೆತು ನಿಜವಾದ ಅರ್ಥದಲ್ಲಿ ‘ಗ್ರಾಮದ ಮಕ್ಕಳು’ ಆಗಿದ್ದಾರೆ. ಅವರು ಕಲಿಯುವಷ್ಟೇ ಅಲ್ಲ, ನಮಗೂ ಕಲಿಸಿದ್ದಾರೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಯುವಕರನ್ನು ಕೃಷಿಯತ್ತ ಸೆಳೆಯಲು ಸರ್ಕಾರವು ಹೊಸ ಯೋಜನೆಗಳು ಮತ್ತು ಉತ್ತೇಜನಾತ್ಮಕ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ. ರಾಜಣ್ಣ, ಕೆಎಂಎಫ್ ಮಾಜಿ ನಿರ್ದೇಶಕ ಆರ್. ಶ್ರೀನಿವಾಸ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ. ಗುಡಿಯಪ್ಪ, ಜಿಕೆವಿಕೆಯ ಡಾ. ಎನ್.ಬಿ. ಪ್ರಕಾಶ್, ವ್ಯವಸ್ಥಾಪಕ ಗೋಪಾಲಮೂರ್ತಿ, ಹರೀಶ್ ರೆಡ್ಡಿ, ಡಾ. ಮಂಜುನಾಥ್, ಡಾ. ಕವಿತಾ, ಡಾ. ಚನ್ನಕೇಶವ, ಡಾ. ಸವಿತ ಸೇರಿದಂತೆ ಹಲವರು ಭಾಗವಹಿಸಿದ್ದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ಬೆಳೆ ಮಾದರಿಗಳು ಮತ್ತು ತಾಂತ್ರಿಕ ಪ್ರದರ್ಶನಗಳು ಜನರ ಗಮನ ಸೆಳೆದವು.