J Venkatapura, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜೆ. ವೆಂಕಟಾಪುರ ಬೈಪಾಸ್ ರಸ್ತೆಯ ಶ್ರೀಸತ್ಯಸಾಯಿ ಲೇಔಟ್ ಬಳಿ ಇರುವ ಮೈದಾನದಲ್ಲಿ, ರಾತ್ರಿ ವೇಳೆ ದುಷ್ಕರ್ಮಿಗಳು ಲೋಡುಗಟ್ಟಲೆ ಸತ್ತ ಮೀನುಗಳನ್ನು ಸುರಿದು ಹೋಗುತ್ತಿರುವ ಘಟನೆಗಳು ನಡೆಯುತ್ತಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸತ್ತ ಮೀನುಗಳಿಂದ ದುರ್ವಾಸನೆ ವ್ಯಾಪಿಸುತ್ತಿದ್ದು, ಲೇಔಟ್‌ನ ಮನೆಮಂದಿ ಹಾಗೂ ಸಮೀಪದ ಹೊಟೇಲ್‌ಗಳಿಗೆ ಬರುವ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸ್ಥಳೀಯರ ಪ್ರಕಾರ, ಚಿಂತಾಮಣಿ ಭಾಗದಿಂದ ನಿಷೇಧಿತ ಕ್ಯಾಟ್ ಫಿಶ್ (Catfish) ಗಳನ್ನು ಪೊಲೀಸರು ಹಿಡಿಯುವ ಭಯದಿಂದಲೋ ಅಥವಾ ಸತ್ತುಹೋದ ಮೀನುಗಳನ್ನೋ ಕೆಲವರು ರಾತ್ರಿ ವೇಳೆ ಟ್ರಾಲಿಗಳಲ್ಲಿ ತಂದು ಗಿಡಗಳೊಳಗೆ ಸುರಿದು ಹೋಗುತ್ತಿದ್ದಾರೆ.
ಸ್ಥಳೀಯ ನಿವಾಸಿ ಲಲಿತಮ್ಮ ಮಾತನಾಡಿ, “ಹಾಡಹಗಲಿನಲ್ಲಿ ಟ್ರಾಕ್ಟರ್‌ನಲ್ಲಿ ಮೀನುಗಳನ್ನು ತುಂಬಿಕೊಂಡು ಬಂದು ಮೈದಾನದಲ್ಲಿ ಸುರಿದು ಹೋಗುತ್ತಾರೆ. ಮೊದಲು ಗೊಬ್ಬರ ಎಂದುಕೊಂಡಿದ್ದೆವು, ಆದರೆ ಬಳಿಕ ದುರ್ವಾಸನೆ ಬಂದ ನಂತರ ಮೀನುಗಳೆಂದು ಗೊತ್ತಾಯಿತು. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಬೇಡಿಕೊಂಡರು.
ಕುಡುಕರ ಹಾವಳಿ ಸ್ಥಳೀಯರ ಆತಂಕಕ್ಕೆ ಕಾರಣ

ರಾತ್ರಿಯ ವೇಳೆ ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ಅವರು ಜೋರಾಗಿ ಕಿರುಚಾಡುವುದು, ಮಧ್ಯರಾತ್ರಿ ತನಕ ಅಡ್ಡಾಡುವುದು ಸಾಮಾನ್ಯವಾಗಿದೆ ಎಂದು ಸ್ಥಳೀಯರಾದ ಶ್ರೀನಿವಾಸ್, ರಾಮಾಂಜಿ ಮತ್ತು ಮೀನಾಕ್ಷಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಬೆಳಿಗ್ಗೆ ಎದ್ದರೆ ಮದ್ಯದ ಬಾಟಲಿಗಳು ಬಿದ್ದಿರುತ್ತವೆ. ಮಹಿಳೆಯರು, ಮಕ್ಕಳು ಭಯದಿಂದ ಹೊರಗೆ ಹೋಗಲು ಹೆದರುತ್ತಿದ್ದಾರೆ,” ಎಂದು ಅವರು ಹೇಳಿದರು.
ಅಧಿಕಾರಿಗಳಿಂದ ಕ್ರಮದ ಭರವಸೆ
ಸ್ಥಳೀಯರ ಆಕ್ರೋಶದ ಹಿನ್ನೆಲೆಯಲ್ಲಿ ಪಂಚಾಯಿತಿ ಅಧಿಕಾರಿಗಳು, “ರಾತ್ರಿಯ ವೇಳೆ ಮೀನು ಸಾಗಾಣಿಕೆ ಅಥವಾ ಅಕ್ರಮ ಸುರಿತ ಮಾಡುವ ವಾಹನಗಳ ನಂಬರ್ ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಭರವಸೆ ನೀಡಿದ್ದಾರೆ.