
Sidlaghatta, Chikkaballapur District : ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಭಾವಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಬಿ.ಎನ್. ರವಿಕುಮಾರ್ ಮಾತನಾಡಿ, “ವಾಲ್ಮೀಕಿ ಮಹರ್ಷಿಯವರ ರಾಮಾಯಣ ಮಹಾಕಾವ್ಯವು ಪ್ರಜಾತಂತ್ರದ ಮೌಲ್ಯಗಳನ್ನು ಸಾರುವ ಅಪೂರ್ವ ಗ್ರಂಥ. ಅವರ ಕೃತಿಯಿಂದ ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗವು ಪಾಠಗಳನ್ನು ಅಳವಡಿಸಿಕೊಂಡರೆ, ನಿಜವಾದ ಜನಸೇವೆ ಸಾಧ್ಯ” ಎಂದು ಹೇಳಿದರು.
ಅವರು ಮುಂದುವರೆದು, ರಾಜ್ಯ ಸರ್ಕಾರದಿಂದ ಶಾಸಕರಿಗೆ ನೀಡಿರುವ ₹25 ಕೋಟಿ ಅನುದಾನದ ಅಡಿಯಲ್ಲಿ, ಗಂಜಿಗುಂಟೆ ಗ್ರಾಮ ಪಂಚಾಯಿತಿಯ ಬಾಳೇಗೌಡನಹಳ್ಳಿ ಮತ್ತು ಹಕ್ಕಿಪಿಕ್ಕಿ ಕಾಲೊನಿಗಳಲ್ಲಿ ತಲಾ ₹50 ಲಕ್ಷ ರೂ. ಅನುದಾನದಲ್ಲಿ ವಾಲ್ಮೀಕಿ ಸಮುದಾಯ ಭವನಗಳನ್ನು ನಿರ್ಮಿಸಲು ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು. ಜೊತೆಗೆ, ತಲಕಾಯಲಬೆಟ್ಟದಲ್ಲಿ ವಾಲ್ಮೀಕಿ ಆಶ್ರಮ ಮತ್ತು ದೇವಾಲಯ ನಿರ್ಮಾಣಕ್ಕಾಗಿ ₹1 ಕೋಟಿ ಯೋಜನೆ ಸಿದ್ಧಪಡಿಸಲು ಸೂಚಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಿವೃತ್ತ ಪ್ರಾಧ್ಯಾಪಕ ಡಾ. ಚನ್ನನರಸಿಂಹಪ್ಪ ಅವರು ಮಹರ್ಷಿ ವಾಲ್ಮೀಕಿ ಜೀವನ ಹಾಗೂ ಕೃತಿಗಳ ಕುರಿತು ಉಪನ್ಯಾಸ ನೀಡಿದರು. ಸಮುದಾಯದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳು ನೀಡಿ ಸನ್ಮಾನಿಸಲಾಯಿತು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಲಕಾಯಲಬೆಟ್ಟ ಹಾಗೂ ಮಯೂರ ವೃತ್ತದ ವಾಲ್ಮೀಕಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು, ನಂತರ ಪಲ್ಲಕ್ಕಿ ಉತ್ಸವ ಮತ್ತು ಜನಪದ ಕಲಾ ಮೆರವಣಿಗೆಗಳು ನಗರದ ಪ್ರಮುಖ ಬೀದಿಗಳಲ್ಲಿ ಭಕ್ತಿಭಾವದಿಂದ ನಡೆದವು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗಗನಸಿಂಧೂ, ತಾ.ಪಂ ಇಓ ಹೇಮಾವತಿ, ನಗರಸಭೆ ಪೌರಾಯುಕ್ತೆ ಅಮೃತ, ಅಧ್ಯಕ್ಷ ವೆಂಕಟಸ್ವಾಮಿ, ಮಾಜಿ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರಕುಮಾರ್, ಆರೋಗ್ಯಾಧಿಕಾರಿ ಡಾ. ವೆಂಕಟೇಶಮೂರ್ತಿ, ಸಮಾಜ ಕಲ್ಯಾಣ ಅಧಿಕಾರಿ ಜಗದೀಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.