
Sidlaghatta : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 94ನೇ ವರ್ಷದ ಹುಟ್ಟು ಹಬ್ಬವನ್ನು ಮೇ 18ರಂದು ಸೋಮವಾರ ಹಂಡಿಗನಾಳದ ಶ್ರೀಬಾಲಾಜಿ ಕನ್ವೆಂಷನ್ ಹಾಲ್ ನಲ್ಲಿ ತಾಲ್ಲೂಕು ಜೆಡಿಎಸ್ ಪಕ್ಷದಿಂದ ಆಚರಿಸಲು ಸಿದ್ದತೆಗಳು ನಡೆದಿವೆ.
ಶಾಸಕ ಬಿ.ಎನ್.ರವಿಕುಮಾರ್ ಅವರು ಬಾಲಾಜಿ ಕನ್ವೆಂಷನ್ ಹಾಲ್ ಗೆ ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ 94ನೇ ವರ್ಷದ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.
ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರ್ಕಾರಿ ಶಾಲೆಯ ಮೂವರು ವಿದ್ಯಾರ್ಥಿಗಳು ಹಾಗೂ ಮೂರು ಸರ್ಕಾರಿ ಶಾಲೆಗಳಿಗೆ ನಗದು ಬಹುಮಾನ ನೀಡುವುದು ಸೇರಿದಂತೆ ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದರು.
ಈ ಇಳಿವಯಸಿನಲ್ಲೂ ಅವರು ಕೃಷಿ, ರೈತರು, ನೀರಾವರಿ ಯೋಜನೆಗಳ ಬಗ್ಗೆ ತೋರುವ ಕಾಳಜಿ, ಕೇಂದ್ರ ಅಥವಾ ರಾಜ್ಯ ಸರ್ಕಾರವೇ ಇರಲಿ ಸರ್ಕಾರದ ಮೇಲೆ ಒತ್ತಡ ಹಾಕಿ ಯೋಜನೆ ಜಾರಿಗೊಳಿಸುವ ಅವರ ರಾಜಕೀಯ ಅನುಭವ, ಜಾಣ್ಮೆ, ಮುತ್ಸದ್ದಿತನ ಬಗ್ಗೆ ಯುವಕರಿಗೆ ತಿಳಿಸುವ ಕೆಲಸ ಆಗಬೇಕಿದೆ ಎಂದರು.
ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಂ.ಮಲ್ಲೇಶ್ ಬಾಬು ಸೇರಿದಂತೆ ಕ್ಷೇತ್ರದ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಮುಖಂಡರಾದ ತಾದೂರು ರಘು, ಆರ್.ಎ.ಉಮೇಶ್, ರಮೇಶ್ ಹಾಜರಿದ್ದರು.