Home News ವೀರಾಪುರ ರೈಲ್ವೆ ಅಂಡರ್‌ಪಾಸ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸೂಚನೆ

ವೀರಾಪುರ ರೈಲ್ವೆ ಅಂಡರ್‌ಪಾಸ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸೂಚನೆ

0
Sidlaghatta NH-234 Railway Underpass Repair

Sidlaghatta : ರಾಷ್ಟ್ರೀಯ ಹೆದ್ದಾರಿ-234ರ ಚಿಂತಾಮಣಿ-ಶಿಡ್ಲಘಟ್ಟ ಮಾರ್ಗ ಮದ್ಯೆ ವೀರಾಪುರ ಬಳಿ ರೈಲ್ವೆ ಅಂಡರ್‌ಪಾಸ್‌ನ ಕಬ್ಬಿಣದ ಸರಳುಗಳು ಪದೇ ಪದೇ ಕಿತ್ತು ಬಂದು ವಾಹನ ಸಂಚಾರಕ್ಕೆ ಅಡಚಣೆ, ಅಪಘಾತಗಳಿಗೆ ಕಾರಣವಾಗುತ್ತಿದ್ದು ಸ್ಥಳಕ್ಕೆ ಶಾಸಕ ಬಿ.ಎನ್.ರವಿಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆ ಅಧಿಕಾರಿಗಳು, ಪೊಲೀಸರೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಹರಿದು ಹೋಗಲು ಅಳವಡಿಸಿರುವ ಕಬ್ಬಿಣದ ಸರಳುಗಳ ವೆಲ್ಡಿಂಗ್ ಪದೇ ಪದೇ ಕಿತ್ತು ಬಂದು ಕಬ್ಬಿಣದ ಸರಳುಗಳು ಮೇಲ್ಮುಖವಾಗಿ ನಿಂತು ಸಂಚಾರಕ್ಕೆ ಅಡಚಣೆ ಆಗಿತ್ತಲ್ಲದೆ ಕಳೆದ ಐದಾರು ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದವು.

ತಾತ್ಕಾಲಿಕವಾಗಿ ವೆಲ್ಡಿಂಗ್ ಮಾಡುವ ಕಾರ್ಯ ನಡೆಸಿದರಾದರೂ ಒಂದೇ ದಿನದಲ್ಲಿ ವೆಲ್ಡಿಂಗ್ ಕಿತ್ತು ಬಂದು ಸಮಸ್ಯೆ ಮುಂದುವರೆದಿತ್ತು. ಸಮಸ್ಯೆ ನಿವಾರಿಸುವಂತೆ ವೀರಾಪುರ, ತಲದುಮ್ಮನಹಳ್ಳಿ ಗ್ರಾಮಸ್ಥರು ಪೊಲೀಸರು, ರೈಲ್ವೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಜತೆಗೆ ಸಮಸ್ಯೆ ಕುರಿತು ಶಾಸಕರ ಗಮನ ಸೆಳೆಯಲಾಗಿತ್ತು.

ಈ ಹಿನ್ನಲೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಅವರು ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮತ್ತೆ ಮತ್ತೆ ಸಮಸ್ಯೆ ಪುನರಾವರ್ತಿಸದಂತೆ ಶಾಶ್ವತವಾಗಿ ದುರಸ್ತಿ ಕೈಗೊಳ್ಳುವ ಬಗ್ಗೆ ಕೆಲ ಕಾಲ ಚರ್ಚಿಸಿದರು.

ಯಾವ ರೀತಿಯ ದುರಸ್ತಿ ಮಾಡಿದರೆ ಮಳೆನೀರು ಸರಾಗವಾಗಿ ಹರಿದು ಹೋಗಬೇಕು, ಕಬ್ಬಿಣದ ಸರಳುಗಳು ಮತ್ತೆ ಕಿತ್ತು ಬರಬಾರದು, ಸಂಚಾರಕ್ಕೆ ಯಾವುದೆ ರೀತಿಯಲ್ಲಿ ತೊಂದರೆ ಆಗಬಾರದು, ರೈಲ್ವೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಡುವೆ ಸಮನ್ವಯತೆ ಸಾಧಿಸಿಕೊಂಡು ದುರಸ್ತಿ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಶಾಸಕರು, ವೀರಾಪುರ ರೈಲ್ವೆ ಅಂಡರ್‌ಪಾಸ್‌ನಲ್ಲಿ ದೀರ್ಘಕಾಲದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಹಲವು ಅಪಘಾತಗಳೂ ಸಂಭವಿಸಿರುವುದು ಗಂಭೀರ ವಿಷಯವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಂಜಿನಿಯರ್‌ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ತಕ್ಷಣವೇ ಕಾಮಗಾರಿ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಕೇವಲ ತಾತ್ಕಾಲಿಕ ದುರಸ್ತಿಗೆ ಸೀಮಿತವಾಗದೆ, ಭವಿಷ್ಯದಲ್ಲಿ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸುವ ರೀತಿಯಲ್ಲಿ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ರೈಲ್ವೆ ಇಲಾಖೆಯ ಅಧಿಕಾರಿಗಳು, ಇಂಜಿನಿಯರ್‌ಗಳು, ನಗರ ಪೊಲೀಸ್ ಠಾಣೆಯ ಪಿಎಸ್‌ಐ ವೇಣುಗೋಪಾಲ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಸೇರಿದಂತೆ ತಲದುಮ್ಮನಹಳ್ಳಿ ಹಾಗೂ ವೀರಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version