
Sidlaghatta : ಸಂವಿಧಾನದ ಆಶಯದಂತೆ ರಾಜಕಾರಣಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ಭಾರತವು ವಿಶ್ವದಲ್ಲೇ ಉನ್ನತ ಸ್ಥಾನಕ್ಕೇರಲಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು. ತಾಲ್ಲೂಕು ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜವಂದನೆ ಸ್ವೀಕರಿಸಿ ಅವರು ಮಾತನಾಡಿದರು.
80 ವರ್ಷಗಳಲ್ಲಿ ಸಾಕ್ಷರತೆ ಎಷ್ಟು ಬೆಳೆದಿದೆ?
1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಭಾರತದ ಜನಸಂಖ್ಯೆ ಸುಮಾರು 34 ಕೋಟಿಯಷ್ಟಿದ್ದು, ಸಾಕ್ಷರತಾ ಪ್ರಮಾಣ ಕೇವಲ ಶೇ 18ರಷ್ಟಿತ್ತು ಎಂದ ರವಿಕುಮಾರ್, 80 ವರ್ಷಗಳ ಬಳಿಕ ದೇಶದ ಸಾಕ್ಷರತಾ ಪ್ರಮಾಣ ಶೇ 83ಕ್ಕೆ ಏರಿಕೆಯಾಗಿರುವುದು ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿರುವ ಮಹತ್ವದ ಪ್ರಗತಿಗೆ ಸಾಕ್ಷಿಯಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶ ಹಾಗೂ ಹಕ್ಕುಗಳನ್ನು ಕಲ್ಪಿಸಿದೆ. ಸಂವಿಧಾನ ನೀಡಿರುವ ಸಮಾನತೆಯ ಹಕ್ಕಿನ ಫಲವಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು ಅವರು ದೇಶದ ರಾಷ್ಟ್ರಪತಿಯಾಗಿ ಅತ್ಯುನ್ನತ ಸ್ಥಾನ ಅಲಂಕರಿಸಿರುವುದು ಹೆಮ್ಮೆಯ ಸಂಗತಿ ಎಂದರು. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರಿಗೂ ಐಎಎಸ್, ಕೆಎಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶ ದೊರೆತಿರುವುದು ಸಂವಿಧಾನದ ಶಕ್ತಿಯಿಂದ ಎಂದ ಅವರು, ಸಂವಿಧಾನದ ಬಲದಿಂದಲೇ ಸಾಮಾನ್ಯ ವ್ಯಕ್ತಿಯಾದ ತಾವು ಶಿಡ್ಲಘಟ್ಟ ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.
ಸರ್ಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ತಲುಪಬೇಕಾದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.
ತ್ಯಾಗ–ಬಲಿದಾನ ಸ್ಮರಿಸೋಣ
ತಹಶೀಲ್ದಾರ್ ಎನ್.ಗಗನಸಿಂಧು ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ, ಬಲಿದಾನ ಹಾಗೂ ದೇಶಪ್ರೇಮದ ಆದರ್ಶಗಳನ್ನು ಇಂದಿನ ಪೀಳಿಗೆ ಅಳವಡಿಸಿಕೊಂಡು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ಕಲ್ಪಿಸಿದ್ದು, ಹಕ್ಕುಗಳ ಜತೆಗೆ ಕರ್ತವ್ಯಗಳನ್ನೂ ಅರಿತುಕೊಂಡು ನಡೆದುಕೊಳ್ಳಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ಧ್ವಜವಂದನೆ
ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಎನ್.ಸಿ.ಸಿ (National Cadet Corps) ವಿದ್ಯಾರ್ಥಿಗಳ ತಂಡ, ಪೊಲೀಸರು ಹಾಗೂ ಗೃಹ ಇಲಾಖೆಯ ಸಿಬ್ಬಂದಿ ಧ್ವಜವಂದನೆ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಲಡ್ಡು ಸಿಹಿ ಹಂಚಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ನಗರಸಭೆ ಪೌರಾಯುಕ್ತೆ ಜಿ.ಅಮೃತ, ಸರ್ಕಲ್ ಇನ್‌ಸ್ಪೆಕ್ಟರ್ ಆನಂದ್ ಕುಮಾರ್, ಬಿಇಒ ಪಿ.ಸ್ವಾಮಿ, ಚೀಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜುಗೂರು ರಾಮಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುರೇಶ್, ಕಾವೇರಿ ಹ್ಯಾಂಡ್ ಲೂಮ್ಸ್ ಅಧ್ಯಕ್ಷ ಬಿ.ಜಿ.ಗಣೇಶ್, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ ಸೇರಿದಂತೆ ಹಲವರು ಹಾಜರಿದ್ದರು.
In English: Sidlaghatta marked the 80th Independence Day with the official flag-hoisting at Nehru Stadium, led by MLA B.N. Ravikumar, who noted India’s literacy rate rose from 18% at independence in 1947 to 83% today, and pointed to President Droupadi Murmu’s tenure as proof of the Constitution’s promise of equal opportunity. Tahsildar N. Gaganasindhu called for citizens to honor freedom fighters’ sacrifice by embracing both their rights and duties. Students, NCC cadets, police, and home guard personnel took part in the flag salute and cultural programs.
ಕಳೆದ ವರ್ಷದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವರದಿಯನ್ನೂ ನೋಡಿ.