Home News ರೈಲ್ವೆ ಅಂಡರ್‌ಪಾಸ್ ಅಪಘಾತಕ್ಕೆ ಆಹ್ವಾನ – ಒಂದೇ ತಿಂಗಳಲ್ಲಿ 3 ಅಪಘಾತ

ರೈಲ್ವೆ ಅಂಡರ್‌ಪಾಸ್ ಅಪಘಾತಕ್ಕೆ ಆಹ್ವಾನ – ಒಂದೇ ತಿಂಗಳಲ್ಲಿ 3 ಅಪಘಾತ

0

Sidlaghatta : ರಾಷ್ಟ್ರೀಯ ಹೆದ್ದಾರಿ-234ರ ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ವೀರಾಪುರ ಬಳಿಯ ರೈಲ್ವೆ ಅಂಡರ್‌ಪಾಸ್‌ನಲ್ಲಿ ಚರಂಡಿಗೆ ಅಳವಡಿಸಿದ್ದ ಕಬ್ಬಿಣದ ಸರಳು ವೆಲ್ಡಿಂಗ್ ಕಿತ್ತು ಬಂದು ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಒಂದು ತಿಂಗಳ ಅವಧಿಯಲ್ಲಿ ಮೂರು ಅಪಘಾತಗಳು ನಡೆದಿವೆ.

ಮೂಡು ಬಿದರೆಯಿಂದ ಮುಳವಾಗಿಲುಗೆ ಸಂಪರ್ಕ ನೀಡುವ ಈ ರಾಷ್ಟ್ರೀಯ ಹೆದ್ದಾರಿ-234 ಮಾರ್ಗವು ಮೂಡುಬಿದರೆ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಮುಳಬಾಗಿಲು ಮೂಲಕ ಆಂಧ್ರಕ್ಕೂ, ತಮಿಳುನಾಡಿಗೂ ಸಂಪರ್ಕ ನೀಡಲಿದೆ.

ಹಾಗಾಗಿ ದಿನದ 24 ಗಂಟೆಗಳ ಕಾಲವೂ ಸದಾ ಸ್ಥಳೀಯರ ವಾಹನಗಳು ಸೇರಿದಂತೆ ರಾಜ್ಯ, ರಾಷ್ಟ್ರ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನಗಳ ದಟ್ಟಣೆಯಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಕಾರದ ಅಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿ ಅಪಘಾತಗಳು ಹೆಚ್ಚುತ್ತಿವೆ.

ಭಾರಿ ವಾಹನಗಳ ಸಂಚಾರದ ಒತ್ತಡದಿಂದ ಕೆಳಸೇತುವೆಯಲ್ಲಿ ಅಳವಡಿಸಿರುವ ಚರಂಡಿಯ ಕಬ್ಬಿಣದ ಸರಳುಗಳ ವೆಲ್ಡಿಂಗ್ ಕಿತ್ತು ಬಂದಿ ಸರಳು ಮೇಲ್ಮುಖವಾಗಿ ನಿಂತಿದೆ. ವೇಗವಾಗಿ ಬರುವ ವಾಹನಗಳಿಗೆ ಮೇಲಕ್ಕೆ ಎದ್ದಿರುವ ಕಬ್ಬಿಣದ ಸರಳು ಸಿಕ್ಕಿ ಹಾಕಿಕೊಂಡು ಅಪಘಾತಗಳು ಸಂಭವಿಸುತ್ತಿವೆ.

ಯಥಾಸ್ಥಿತಿ :

ಕಳೆದ ಐದಾರು ತಿಂಗಳಲ್ಲಿ ಮೂರು ಭಾರಿ ಕಿತ್ತು ಬಂದಿರುವ ಕಬ್ಬಿಣದ ಸರಳುಗಳಿಗೆ ವೆಲ್ಡಿಂಗ್ ಮಾಡಿ ತಾತ್ಕಾಲಿಕ ದುರಸ್ತಿ ಮಾಡುತ್ತಿದ್ದು ಭಾರಿ ವಾಹನಗಳು ಸಂಚರಿಸುತ್ತಿದ್ದಂತೆ ಐದಾರು ದಿನಗಳಲ್ಲಿ ವೆಲ್ಡಿಂಗ್ ಬಿಟ್ಟುಕೊಂಡು ಯಥಾ ಪ್ರಕಾರ ಕಬ್ಬಿಣದ ಸರಳುಗಳು ಕಿತ್ತು ಬಂದು ಮೇಲೇಳುತ್ತಿವೆ. ಅಪಘಾತಗಳು ಸಂಭವಿಸುತ್ತಿವೆ.

ಕಳೆದ ಹದಿನೈದು ದಿನಗಳ ಹಿಂದೆ ಕಬ್ಬಿಣದ ಸರಳುಗಳು ಕಿತ್ತು ಬಂದು ಚಿಂತಾಮಣಿ ತಾಲ್ಲೂಕು ಮೈಲಪ್ಪನಹಳ್ಳಿಯ ಯುವಕನೊಬ್ಬ ಬಿದ್ದು ಮುಖ ಮೂತಿ ಕಿತ್ತು ಬಂದಿತ್ತು. ಆಗ ವೀರಾಪುರ, ತಲದುಮ್ಮನಹಳ್ಳಿ ಗ್ರಾಮಸ್ಥರು, ಪೊಲೀಸರ ಒತ್ತಡದಿಂದ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್ ಸ್ಥಳಕ್ಕೆ ಬಂದು ತಾತ್ಕಾಲಿಕವಾಗಿ ವೆಲ್ಡಿಂಗ್ ಮಾಡಿ ಮುಗಿಸಿ ಕೈ ತೊಳೆದುಕೊಂಡರು.

ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದಾಗ ಹತ್ತಿಪ್ಪತ್ತು ದಿನಗಳ ಕಾಲಾವಕಾಶ ಕೊಡಿ. ಶಾಶ್ವತವಾಗಿ ಇರುವಂತೆ ದುರಸ್ತಿ ಮಾಡಿ ಹೋದವರು ಇಪ್ಪತ್ತು ದಿನಗಳು ಕಳೆದರೂ ಈ ಕಡೆ ಬರಲಿಲ್ಲ. ಮತ್ತೆ ಅಷ್ಟರಲ್ಲಿ ಮತ್ತೆ ವೆಲ್ಡಿಂಗ್ ಕಿತ್ತು ಬಂದಿದ್ದು ಯಥಾ ಪ್ರಕಾರ ಅದೇ ಸಮಸ್ಯೆ ಮುಂದುವರೆದಿದೆ.

National Highway Railway Underpass Accident

ವೆಲ್ಡಿಂಗ್‌ ಗೆ ವಿರೋಧ :

ಈಗಲೂ ವೆಲ್ಡಿಂಗ್ ಮಾಡಲು ಬಂದವರನ್ನು ರೈತ ಸಂಘದ ಉಪಾಧ್ಯಕ್ಷ ಮುನಿನಂಜಪ್ಪ, ಮಂಜುನಾಥ್ ಸೇರಿದಂತೆ ವೀರಾಪುರ, ತಲದುಮ್ಮನಹಳ್ಳಿ ಗ್ರಾಮಸ್ಥರು ತಡೆದು, ಮಾಡಿದರೆ ಶಾಶ್ವತ ದುರಸ್ತಿ ಮಾಡಿ ಇಲ್ಲವಾದರೆ ಬೇಡ ಎಂದು ವೆಲ್ಡಿಂಗ್ ಮಾಡಲು ಬಿಡಲಿಲ್ಲ. ಜತೆಗೆ ಕಬ್ಬಿಣದ ಸರಳು ಕಿತ್ತು ಬಂದಿದ್ದು, ರಸ್ತೆಯ ಒಂದು ಬದಿ ಮರ ಕಲ್ಲುಗಳನ್ನು ಅಡ್ಡಲಾಗಿ ಇಟ್ಟು ರಸ್ತೆ ಸಂಚಾರ ಬಂದ್ ಮಾಡಿದರು.

ಆಗ ಗ್ರಾಮಾಂತರ ಠಾಣೆಯ ಎಸ್‌.ಐ ಸುನಿಲ್ ಕುಮಾರ್ ಅವರು ಕರೆ ಮಾಡಿ ಸಧ್ಯಕ್ಕೆ ವೆಲ್ಡಿಂಗ್ ಮಾಡಿ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಅವಕಾಶ ಮಾಡಿಕೊಡಿ, ವಾರಹತ್ತು ದಿನಗಳಲ್ಲಿ ಶಾಶ್ವತ ಕೆಲಸ ಮಾಡಿಸುವ ಭರವಸೆ ನೀಡಿ ಗ್ರಾಮಸ್ಥರ ಮನವೊಲಿಸಿದರು.

ಎಚ್ಚರಿಕೆ :

ಪೊಲೀಸರು ಮತ್ತು ಹೈವೇ ಪ್ರಾಧಿಕಾರದ ಅಧಿಕಾರಿಗಳ ಮನವಿಗೆ ಮೇರೆಗೆ ವೆಲ್ಡಿಂಗ್ ಮಾಡಲು ಅವಕಾಶ ಕೊಟ್ಟಿರುವ ಗ್ರಾಮಸ್ಥರು ವಾರದೊಳಗೆ ಶಾಶ್ವತವಾಗಿ ದುರಸ್ತಿ ಕಾರ್ಯ ಮಾಡದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.


ಐದಾರು ತಿಂಗಳಲ್ಲಿ ಮೂರು ನಾಲ್ಕು ಭಾರಿ ವೆಲ್ಡಿಂಗ್ ಮಾಡಿ ಹೋಗಿದ್ದು ಅದು ಮತ್ತೆ ಮತ್ತೆ ಕಿತ್ತು ಬರುತ್ತಿದೆ. ಶಾಶ್ವತವಾಗಿ ದುರಸ್ತಿ ಕಾರ್ಯ ಮಾಡಬೇಕೆಂಬುದು ನಮ್ಮ ಒತ್ತಾಯ. ಪೊಲೀಸರು ಮತ್ತು ಹೈವೇ ಅಧಿಕಾರಿಗಳ ಮನವಿ ಮೇರೆಗೆ ಈ ಭಾರಿ ಬಿಟ್ಟಿದ್ದೇವೆ. ವಾರಹತ್ತು ದಿನಗಳಲ್ಲಿ ಶಾಶ್ವತ ದುರಸ್ತಿ ಮಾಡದಿದ್ದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ.

-ಮುನಿನಂಜಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version