Home News ಲಸಿಕೆಗಾಗಿ ಶಿಡ್ಲಘಟ್ಟಕ್ಕೆ ಹೊರಜಿಲ್ಲೆಗಳಿಂದ ಬಂದ ಜನರು

ಲಸಿಕೆಗಾಗಿ ಶಿಡ್ಲಘಟ್ಟಕ್ಕೆ ಹೊರಜಿಲ್ಲೆಗಳಿಂದ ಬಂದ ಜನರು

0

ಶಿಡ್ಲಘಟ್ಟ ನಗರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಪ್ರಕ್ರಿಯೆ ಸೋಮವಾರದಿಂದ ಪ್ರಾರಂಭವಾಗಿದ್ದು,  ನಗರದ ಪ್ರಾಥಮಿಕ ಅರೋಗ್ಯ ಕೇಂದ್ರದ ಪ್ರಸ್ತುತ ಲಸಿಕಾ ಕೇಂದ್ರವಾದ ಸ್ತ್ರೀ ಶಕ್ತಿ ಭವನದ ಮುಂದೆ ಜನ ಮುಂಜಾನೆಯಿಂದಲೇ ಲಸಿಕೆ ಪಡೆಯಲು ಜಮಾಯಿಸಿದ್ದರು.

 ಆನ್ ಲೈನ್ ಮೂಲಕ ಕಾಯ್ದಿರಿಸಿದವರಿಗೆ ಮಾತ್ರ ಲಸಿಕೆ ಕೊಡುವ ಪ್ರಕ್ರಿಯೆ ಜಾರಿಯಲ್ಲಿದ್ದು,  ಕೊವಿನ್, ಆರೋಗ್ಯ ಸೇತು ಆಪ್ ಮೂಲಕ ಲಸಿಕೆ ಪಡೆದುಕೊಳ್ಳುವ ಸಮಯವನ್ನು ಮುಂಚಿತವಾಗಿಯೇ ಕಾಯ್ದಿರಿಸಿ ತಮ್ಮ ಸರತಿಗಾಗಿ ಸಾಲಿನಲ್ಲಿ ಕಾದು ನಿಂತಿದ್ದರು. ಕಾಯ್ದಿರಿಸಿದ ಸಮಯಕ್ಕೆ ಮುಂಚಿತವಾಗಿಯೇ ಲಸಿಕೆ ಕೇಂದ್ರದ ಮುಂದೆ ಜನ ಜಮಾವಣೆಗೊಂಡಿದ್ದರಿಂದ ಪ್ರಾರಂಭದಲ್ಲಿ ತೊಡಕಾದರೂ, ನಂತರ ನೋಂದಾವಣೆ ಸಮಯದ ಪ್ರಕಾರ ಜನರನ್ನು ಲಸಿಕೆ ಪಡೆಯಲು ಅನುವು ಮಾಡಿಕೊಟ್ಟಿದ್ದರಿಂದ ಲಸಿಕೆ ಪ್ರಕ್ರಿಯೆ ಸರಾಗವಾಗಿ ಮುಂದುವರೆದಿತ್ತು.

ಕೆಲವೇ ಗಂಟೆಗಳಲ್ಲಿ ನೊಂದಣಿ ಫುಲ್ :

Vaccination Covid sidlaghatta

ಶಿಡ್ಲಘಟ್ಟ ನಗರದ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಮಾತ್ರ 18 ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಸಮಯ ಕಾಯ್ದಿರಿಸುವ ಪ್ರಕ್ರಿಯೆ ಭಾನುವಾರ ಪ್ರಾರಂಭವಾಗಿದ್ದು ಕೆಲವೇ ಗಂಟೆಗಳಲ್ಲಿ ನೋಂದಣಿಗೆ ಲಭ್ಯವಿದ್ದ ವಾರದ ಎಲ್ಲಾ ಸ್ಲಾಟ್ ಗಳು ಪೂರ್ಣಗೊಂಡಿವೆ. ಜನರು ಲಸಿಕೆ ಪಡೆಯುವ ಸಮಯವನ್ನು ಕಾಯ್ದಿರಿಸಲು ಪರದಾಡುವಂತಾಗಿದೆ. ಸೋಮವಾರ ಬೆಳಗ್ಗೆಯಷ್ಟೇ ಸುದ್ದಿಗಳಲ್ಲಿ ಲಸಿಕೆ ಸಿಗುವ ಬಗ್ಗೆ ಮಾಹಿತಿ ತಿಳಿದ ಜನರು ಕೊವಿನ್ ಆಪ್ ನಲ್ಲಿ ಸಮಯ ಕಾಯ್ದಿರಿಸಲು ಅವಕಾಶ ಸಿಗದೆ ಮುಂದಿನ ವಾರದ ಸರತಿಗಾಗಿ ಕಾಯುವಂತಾಗಿದೆ.

ಲಸಿಕೆ ಪಡೆಯಲು ಅಧಿಕ ಸಂಖ್ಯೆಯಲ್ಲಿ ಬಂದ ಹೊರಜಿಲ್ಲೆಯ ನಿವಾಸಿಗಳು :

ಶಿಡ್ಲಘಟ್ಟದಲ್ಲಿ ಲಸಿಕೆಗಾಗಿ ಹೊರಜಿಲ್ಲೆಗಳಿಂದ ಬಂದವರು ಸಾಲುಗಟ್ಟಿ ನಿಂತಿರುವುದು

ಸೋಮವಾರ ಮುಂಜಾನೆ ಕೊವಿಡ್ ಲಸಿಕೆ ಪಡೆಯಲು ಶಿಡ್ಲಘಟ್ಟದ ಲಸಿಕೆ ಕೇಂದ್ರದ ಮುಂದೆ ೯ ಗಂಟೆಗೆ ಜಮಾವಣೆಗೊಂಡ ಜನರಲ್ಲಿ ಹೆಚ್ಚಿನವರು ಅನ್ಯ ಜಿಲ್ಲೆಯವರಾಗಿದ್ದರು. ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ, ಯಲಹಂಕ, ದೇವನಹಳ್ಳಿಯಿಂದ ಲಸಿಕೆ ಪಡೆಯಲು ಕಾರುಗಳಲ್ಲಿ ಬಂದಿದ್ದರು. ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಅಂತರ್ಜಿಲ್ಲಾ ಪ್ರಯಾಣ ನಿಷೇಧಿಸಿದ್ದರೂ, ಲಸಿಕೆ ಪಡೆಯಲು ತಮ್ಮ ಹತ್ತಿರದ ಲಸಿಕೆ ಕೇಂದ್ರವನ್ನು ಆಯ್ಕೆ ಮಾಡದೆ, ಪ್ರಸ್ತುತ 18 ವರ್ಷ ಮೇಲ್ಪಟ್ಟವರಿಗೆ ಒಂದು ಲಸಿಕೆ ಕೇಂದ್ರ ಹೊಂದಿರುವ ಶಿಡ್ಲಘಟ್ಟವನ್ನು ಆಯ್ಕೆ ಮಾಡಿಕೊಂಡಿದ್ದಾರೆ.  ಹೆಚ್ಚು ಕೋವಿಡ್ ಪ್ರಕರಣಗಳು ಹೊಂದಿರುವ ಬೆಂಗಳೂರಿನಂತಹ ಜಿಲ್ಲೆಯಿಂದ ಲಸಿಕೆ ಹಾಕಿಸಿಕೊಳ್ಳಲು ಬರುತ್ತಿರುವುದರಿಂದ ಸೋಂಕು ಹರಡುವ ಸಾಧ್ಯತೆಯ ಜೊತೆಗೆ ಸ್ಥಳೀಯರಿಗೆ ಲಸಿಕೆ ಸಿಗದೇ ಹೋಗಬಹುದೆಂಬ ಆತಂಕ ಜನರಲ್ಲಿ ಶುರುವಾಗಿದೆ.  

NO COMMENTS

LEAVE A REPLY

Please enter your comment!
Please enter your name here

error: Content is protected !!
Exit mobile version