
ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಸೋಮವಾರ “ಕೋವಿಡ್ ಲಸಿಕಾ ಉತ್ಸವ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಕೊರೊನಾ ಸೋಂಕಿನ ಎರಡನೇ ಅಲೆ ಭೀತಿ ಹಾಗೂ ರೂಪಾಂತರಿ ತಳಿಯ ಆತಂಕದ ವಾತಾವರಣದಲ್ಲಿ ಸಾರ್ವಜನಿಕರು ಆರೋಗ್ಯ ರಕ್ಷಣೆಗೆ ಕೋವಿಡ್ ಲಸಿಕೆ ಪಡೆಯಲು ಸ್ವಪ್ರೇರಣೆಯಿಂದ ಮುಂದೆ ಬರಬೇಕು ಎಂದು ಅವರು ತಿಳಿಸಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಹೀಗಾಗಿ ಜನರು ಲಸಿಕೆ ಪಡೆಯಲು ಆತಂಕ ಪಡಬೇಕಿಲ್ಲ ಎಂದು ಕಿವಿಮಾತು ಹೇಳಿದರು.
“ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್, ವೈದ್ಯರು ಧೈರ್ಯದಿಂದ ಲಸಿಕೆ ಪಡೆದಿದ್ದಾರೆ, ಲಸಿಕೆ ಕುರಿತ ವದಂತಿಗಳಿಗೆ ಜನ ಕಿವಿಗೊಡಬಾರದು. ಲಸಿಕೆ ಹಾಕಿಸಿಕೊಂಡರೆ ಕೋವಿಡ್‌ನಿಂದ ಸಂಪೂರ್ಣ ಸುರಕ್ಷತೆ ಪಡೆದಿದ್ದೇವೆ ಎನ್ನುವಂತಿಲ್ಲ. ಲಸಿಕೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾದರೆ ಮಾತ್ರ ಪ್ರಯೋಜನ. ಲಸಿಕೆ ಪಡೆದರೂ ಅಂತರ ಕಾಯ್ದುಕೊಳ್ಳವುದು, ಮಾಸ್ಕ್ ಧರಿಸುವುದು ಮುಖ್ಯ” ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, “ಕೊರೊನಾ ಸೋಂಕು ಅತ್ಯಂತ ವೇಗವಾಗಿ ಹರಡುತ್ತಿದೆ. ಜನತೆ ಕೋವಿಡ್ ಮಾರ್ಗಸೂಚಿ ಪಾಲನೆ ನಿರ್ಲಕ್ಷಿಸಬಾರದು. ವಿಜ್ಞಾನಿಗಳ ಸಂಶೋಧನೆಯ ಫಲವಾಗಿ ಲಸಿಕೆ ಬಿಡುಗಡೆಯಾಗಿದೆ. ಲಸಿಕೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವಷ್ಟೇ ಲಸಿಕೆ ನೀಡಲಾಗುತ್ತಿದೆ” ಎಂದು ಹೇಳಿದರು.
ವಕೀಲರಿಗೆ ಲಸಿಕೆ: ಈ ಸಂದರ್ಭದಲ್ಲಿ 37 ಮಂದಿ ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿ ಲಸಿಕೆ ಪಡೆದರು. ಕೆಲವು ವಕೀಲರು ತಮ್ಮ ಕಕ್ಷಿದಾರರಿಗೂ ಮನವೊಲಿಸಿ ಲಸಿಕೆ ಕೊಡಿಸಿದರು.
ಸಿವಿಲ್ ನ್ಯಾಯಾಧೀಶರಾದ ಡಿ.ರೋಹಿಣಿ, ತಹಶೀಲ್ದಾರ್ ರಾಜೀವ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರ ಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ವಕೀಲರಾದ ಎಂ.ಬಿ.ಲೋಕೇಶ್, ಕೆ.ಮಂಜುನಾಥ್, ವಿ.ಸುಬ್ರಮಣ್ಯಪ್ಪ, ನ್ಯಾಯಾಲಯ ಸಿಬ್ಬಂದಿ ಶಶಿಕಲಾ, ಬಾಲಚಂದ್ರ ಹಾಜರಿದ್ದರು.