
Sidlaghatta : ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿಕಲಚೇತನರ ಕುಂದುಕೊರತೆಗಳ ಸಭೆ ನಡೆಯಿತು. ಎರಡು ವರ್ಷಗಳ ಬಳಿಕ ಸಭೆ ಆಯೋಜಿಸಲಾಗಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿಕಲಚೇತನರ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಹಲವು ತಿಂಗಳಿಂದ ಪಿಂಚಣಿ ದೊರೆಯದಿರುವುದು, ಸಾರ್ವಜನಿಕ ಕಟ್ಟಡಗಳು ಹಾಗೂ ಶೌಚಾಲಯಗಳು ವಿಕಲಚೇತನ ಸ್ನೇಹಿಯಾಗಿಲ್ಲದಿರುವುದು, ಗ್ರಾಮ ಪಂಚಾಯಿತಿಗಳಲ್ಲಿ ವಿಕಲಚೇತನರಿಗಾಗಿ ಮೀಸಲಿರುವ ಅನುದಾನದ ಬಳಕೆ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಸೌಲಭ್ಯಗಳು ಸಮರ್ಪಕವಾಗಿ ತಲುಪದಿರುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಬೇಕಿದ್ದ ತಹಶೀಲ್ದಾರ್ ಅವರ ಪರವಾಗಿ ಗ್ರೇಡ್–2 ತಹಶೀಲ್ದಾರ್ ಮಂಜುನಾಥ್ ಭಾಗವಹಿಸಿದ್ದರು. ತಾಲ್ಲೂಕು ಪಂಚಾಯಿತಿ EO ಆರ್. ಹೇಮಾವತಿ, CDPO ವಿದ್ಯಾ ವಸ್ತ್ರದ್, ಆರೋಗ್ಯ ಇಲಾಖೆಯ ವೈದ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
ಸಭೆ ಎಷ್ಟು ಬಾರಿ ನಡೆಯಬೇಕು?
ಸರ್ಕಾರದ ನಿಯಮದಂತೆ ವಿಕಲಚೇತನರ ಕುಂದುಕೊರತೆಗಳ ಸಮಿತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಬೇಕು. ಆದರೆ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸಭೆ ನಡೆದಿರಲಿಲ್ಲ ಎಂದು ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿಯಲ್ಲಿರುವ ಎಲ್ಲ ಇಲಾಖೆಗಳ ಅಧಿಕಾರಿಗಳು ಮುಂದಿನ ಸಭೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯಾವ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಕೆಯಾಯಿತು?
ಹಲವು ವಿಕಲಚೇತನರಿಗೆ ತಿಂಗಳುಗಳಿಂದ ಪಿಂಚಣಿ ದೊರೆಯುತ್ತಿಲ್ಲ ಎಂಬ ಅಹವಾಲು ಸಲ್ಲಿಸಲಾಯಿತು. ಸಮಸ್ಯೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಸಾರ್ವಜನಿಕ ಕಟ್ಟಡಗಳು ಮತ್ತು ಶೌಚಾಲಯಗಳನ್ನು ವಿಕಲಚೇತನರು ಸುಲಭವಾಗಿ ಬಳಸುವ ರೀತಿಯಲ್ಲಿ ನಿರ್ಮಿಸಬೇಕು ಎಂದು ಒತ್ತಾಯಿಸಲಾಯಿತು. ಈಗಿರುವ ಕೆಲವು ವಿಕಲಚೇತನ ಸ್ನೇಹಿ ಶೌಚಾಲಯಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ಪ್ರತಿನಿಧಿಗಳು ಗಮನ ಸೆಳೆದರು.
ಗ್ರಾಮ ಪಂಚಾಯಿತಿಗಳಿಗೆ ಲಭ್ಯವಾಗುವ ವಿಕಲಚೇತನರ ಶೇ 5ರ ಅನುದಾನವನ್ನು ಶಿಕ್ಷಣ, ಆರೋಗ್ಯ, ಜೀವನೋಪಾಯ ಸೇರಿದಂತೆ ಮಾರ್ಗಸೂಚಿಯಲ್ಲಿರುವ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ಒತ್ತಾಯಿಸಲಾಯಿತು. ಮುಂದಿನ ಕ್ರಿಯಾಯೋಜನೆಗಳಲ್ಲಿ ಈ ಅಂಶಗಳಿಗೆ ಆದ್ಯತೆ ನೀಡುವಂತೆ ಪಂಚಾಯಿತಿಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು EO ಆರ್. ಹೇಮಾವತಿ ತಿಳಿಸಿದರು.
ಬೆನ್ನುಹುರಿ ಅಪಘಾತದಿಂದ ಅಂಗವೈಕಲ್ಯ ಹೊಂದಿರುವವರು ಸೇರಿದಂತೆ ಹಲವು ವಿಕಲಚೇತನರಿಗೆ ಅಗತ್ಯ ಚಿಕಿತ್ಸೆ, ಔಷಧ ಹಾಗೂ ಸಹಾಯಕ ಸಾಧನಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂಬ ಅಹವಾಲು ಕೇಳಿಬಂತು. ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಸಭೆಗೆ ಮುಂಚಿತವಾಗಿ ಸಮರ್ಪಕ ಮಾಹಿತಿ ನೀಡದ ಕಾರಣ ಬೆರಳೆಣಿಕೆಯಷ್ಟು ವಿಕಲಚೇತನರು ಮಾತ್ರ ಭಾಗವಹಿಸಿದ್ದರು. ಮುಂದಿನ ಸಭೆಯ ದಿನಾಂಕವನ್ನು ಮುಂಚಿತವಾಗಿ ಪ್ರಕಟಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರೇಡ್ 2 ತಹಶೀಲ್ದಾರ್ ತಿಳಿಸಿದರು.
SCI ನವಜೀವನ ಸೇವಾ ಸಂಘದ ಅಧ್ಯಕ್ಷ ಬೆಳ್ಳೂಟಿ ಮುನಿರಾಜು, ಅಂಧಮಕ್ಕಳ ಶಾಲೆಯ ಗೋಪಾಲ್, ಸತೀಶ್ ಜಯರಾಮ್, VRW, MRW ಹಾಗೂ ನೋಡಲ್ ಅಧಿಕಾರಿ ಲಕ್ಷ್ಮಿದೇವಮ್ಮ ಭಾಗವಹಿಸಿದ್ದರು.
ವಿಕಲಚೇತನರಿಗೆ ಸೌಲಭ್ಯ ವಿತರಣೆ ಕುರಿತು ವಿಶೇಷಚೇತನರಿಗೆ ದ್ವಿಚಕ್ರ ವಾಹನ ವಿತರಿಸಿದ ಶಾಸಕ ರವಿಕುಮಾರ್ ಹಾಗೂ ವಿಕಲಚೇತನ ವಿದ್ಯಾರ್ಥಿನಿಗೆ ಲ್ಯಾಪ್‌ಟಾಪ್, ಎಲೆಕ್ಟ್ರಿಕ್ ವೀಲ್‌ಚೇರ್ ವಿತರಿಸಿದ ಶಾಸಕ ಬಿ.ಎನ್. ರವಿಕುಮಾರ್ ವರದಿಗಳನ್ನೂ ಓದಿ.
In English: A grievance meeting for persons with disabilities was held at the Sidlaghatta Taluk Panchayat hall on Friday, the first in two years. Although government rules require the committee to meet once every two months, representatives complained that no meeting had been held in the taluk for two years and demanded that officials of all member departments attend the next one. Issues raised included pensions not received for months, public buildings and toilets that are not disability-friendly, the use of the 5% grant reserved for persons with disabilities in gram panchayats, and gaps in treatment, medicines and assistive devices, including for people disabled by spinal cord injuries. Taluk Panchayat EO (Executive Officer) R. Hemavathi said a circular will be issued asking panchayats to prioritise the 5% grant for education, health and livelihood in their action plans, and health officials assured that the required facilities will be provided. Only a handful of persons with disabilities attended because of inadequate advance notice; Grade-2 Tahsildar Manjunath, who attended on behalf of the Tahsildar, said the next meeting’s date will be announced in advance. CDPO (Child Development Project Officer) Vidya Vastrad and VRW (Village Rehabilitation Worker) and MRW (Multipurpose Rehabilitation Worker) staff were among those present.