Sidlaghatta : ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂಬ ಬಹುದಿನಗಳ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಸೆಪ್ಟೆಂಬರ್ 9ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ನಡೆಸಲಿರುವ ಹೋರಾಟದ ಪೂರ್ವಭಾವಿ ಸಭೆ ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು.
In English: The Karnataka State Madivala Sangha held a preparatory meeting in Sidlaghatta ahead of a September 9 protest march to the Chikkaballapur Deputy Commissioner’s office, demanding the Madivala (washerman) community’s long-pending inclusion in the Scheduled Caste list.
ಕರ್ನಾಟಕ ರಾಜ್ಯ ಮಡಿವಾಳರ ಸಂಘ ಮತ್ತು ಎಸ್.ಸಿ. ಹೋರಾಟ ಸಮಿತಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಮಡಿವಾಳರ ಸಂಘದ ಸಂಯುಕ್ತಾಶ್ರಯದಲ್ಲಿ ಸಭೆ ಆಯೋಜನೆಗೊಂಡಿತ್ತು. ಬುಧವಾರ (ಸೆ. 9) ಬೆಳಿಗ್ಗೆ 11 ಗಂಟೆಗೆ ಚಿಕ್ಕಬಳ್ಳಾಪುರದ ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಸಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್. ಸಿದ್ಧಗಂಗಯ್ಯ, ಸಂವಿಧಾನದ 14, 15, 16, 17ನೇ ವಿಧಿಗಳಡಿ ದೊರೆಯುವ ಹಕ್ಕುಗಳಿಂದ ಮಡಿವಾಳ ಸಮುದಾಯ ದಶಕಗಳಿಂದ ವಂಚಿತವಾಗಿದೆ ಎಂದು ಆರೋಪಿಸಿದರು. 1933ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ರಾಜ್ಯ ಮಡಿವಾಳ ಸಂಘ ಸುಮಾರು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದು, 2014ರ ಜನವರಿ 5ರಂದು ಬೆಂಗಳೂರಿನಲ್ಲಿ ಹಾಗೂ 2016ರ ಫೆಬ್ರುವರಿ 1ರಂದು ಕೂಡಲ ಸಂಗಮದಲ್ಲಿ ಸಾವಿರಾರು ಜನರ ಬೃಹತ್ ಸಮಾವೇಶ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿತ್ತು ಎಂದು ಸ್ಮರಿಸಿದರು. ಆದರೂ ಈವರೆಗೆ ಯಾವುದೇ ಪೂರಕ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಡಿವಾಳ, ಅಗಸ, ರಜಕ, ಪರೀಟ್ ಸಮುದಾಯದ 15ರಿಂದ 18 ಲಕ್ಷ ಜನಸಂಖ್ಯೆ ಇದ್ದು, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ ಎಂದು ಮುಖಂಡರು ತಿಳಿಸಿದರು. ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಈ ಸಮುದಾಯವನ್ನು ಈಗಾಗಲೇ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದ್ದು, ಕರ್ನಾಟಕ ಸರ್ಕಾರವೂ ಇದೇ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಎಸ್.ಸಿ. ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್. ಸಿದ್ಧಗಂಗಯ್ಯ, ಕರ್ನಾಟಕ ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಆರ್.ಮಂಜುನಾಥ್, ವಿ.ಸೋಮಶೇಖರ್, ಗಿರೀಶ್, ವೇಣುಗೋಪಾಲ್, ಡಿ.ವಿ.ಕೃಷ್ಣಪ್ಪ, ಎನ್.ಹರೀಶ್, ಎಚ್.ಎನ್.ಮುನಿರಾಜು, ಎಚ್.ಕೆ.ಶ್ರೀನಿವಾಸ್, ದೇವರಾಜ್, ರಮೇಶ್, ದೊಡ್ಡವೇಮಣ್ಣ, ಚಂದ್ರಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

