Mallur, Sidlaghatta, Chikkaballapur : ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಪ್ರೌಢಶಾಲಾ ವಿಭಾಗದಲ್ಲಿ ಆಯೋಜಿಸಲಾದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಮಿನುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಅಧ್ಯಕ್ಷ ರಾಮಾಂಜಿನಪ್ಪ ಅವರು, “ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅನ್ವೇಷಣೆ ಮತ್ತು ವಿಶ್ಲೇಷಣಾತ್ಮಕ ಮನೋಭಾವನೆ ಮೂಡಿಸಲು ಇಂತಹ ವಸ್ತುಪ್ರದರ್ಶನಗಳು ಅತ್ಯಂತ ಸಹಾಯಕವಾಗುತ್ತವೆ,” ಎಂದರು.
“ಮೇಡಂ ಕ್ಯೂರಿ, ಎಡಿಸನ್, ಸಿ.ವಿ. ರಾಮನ್, ಸಿ.ಎನ್.ಆರ್. ರಾವ್‌ಗಳಂತಹ ವಿಜ್ಞಾನಿಗಳು ಸಮಾಜದ ಒಳಿತಿಗಾಗಿ ದುಡಿದವರು. ವಿದ್ಯಾರ್ಥಿಗಳು ಅವರ ಜೀವನದಿಂದ ಪ್ರೇರಣೆ ಪಡೆಯಬೇಕು. ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿದರೆ ಭವಿಷ್ಯ ಖಂಡಿತವಾಗಿಯೂ ಉಜ್ವಲವಾಗುತ್ತದೆ,” ಎಂದು ಅವರು ಹೇಳಿದರು.
ಮುಖ್ಯಶಿಕ್ಷಕ ನವೀನ್ ಮಾತನಾಡಿ, “ಪ್ರಾಥಮಿಕ ಮತ್ತು ಪ್ರೌಢಶಾಲೆ ಹಂತದಲ್ಲಿಯೇ ವಿಜ್ಞಾನ ಕಲಿಕೆಯ ಆಸಕ್ತಿ ಮೂಡಿಸುವುದು ಅಗತ್ಯ. ವಿದ್ಯಾರ್ಥಿಗಳು ಈ ರೀತಿಯ ಪ್ರದರ್ಶನಗಳ ಮೂಲಕ ನೈಜ ಜೀವನಕ್ಕೆ ಸಂಬಂಧಿಸಿದ ಕಲ್ಪನೆಗಳನ್ನು ಅರಿಯಬಹುದು,” ಎಂದರು.
ವಿದ್ಯಾರ್ಥಿಗಳು ತಂತ್ರಜ್ಞಾನ, ಕೃಷಿ, ಪರಿಸರ ಸಂರಕ್ಷಣೆ, ಆರೋಗ್ಯ, ನವೀನ ಇಂಧನ, ಕೈಗಾರಿಕೆ, ಸ್ಮಾರ್ಟ್ ಸಿಟಿ ಕಲ್ಪನೆ ಮುಂತಾದ ವಿಷಯಗಳ ಆಧಾರದ ಮೇಲೆ ಪ್ರಾಯೋಗಿಕ ಮಾದರಿಗಳನ್ನು ಸಿದ್ಧಪಡಿಸಿದ್ದರು. ಸುಮಾರು ಒಂದು ತಿಂಗಳ ಕಾಲ ಮಾಡಿದ ಪರಿಶ್ರಮದ ಫಲವಾಗಿ ಪ್ರದರ್ಶನದಲ್ಲಿ ಅನೇಕ ನವೀನ ಮಾದರಿಗಳು ಗಮನ ಸೆಳೆದವು.
ಪೋಷಕರು, ಸ್ಥಳೀಯ ನಾಗರಿಕರು ಹಾಗೂ ಗ್ರಾಮಸ್ಥರು ಪ್ರದರ್ಶನ ವೀಕ್ಷಣೆಗೆ ಆಗಮಿಸಿ ವಿದ್ಯಾರ್ಥಿಗಳ ಪ್ರಯತ್ನವನ್ನು ಮೆಚ್ಚಿದರು. ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
For Daily Updates WhatsApp ‘HI’ to 7406303366
